ಚಿಕ್ಕಮಗಳೂರು: ವಿದ್ಯಾವಂತ ಯುವಕರಿಗಾಗಿ ರಾಜ್ಯ ಸರ್ಕಾರ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ಕೊಡುತ್ತಿದ್ದು, ಈ ಬಗ್ಗೆ ತಳಮಟ್ಟದಿಂದ ರೈತರಲ್ಲಿ ಅರಿವು ಮೂಡಿಸುವ ಮೂಲಕ ಜಾಗೃತಿ ಮೂಡಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಶಾಸಕ ಹೆಚ್.ಡಿ ತಮ್ಮಯ್ಯ ಸೂಚಿಸಿದರು.
ಅವರು ಇಂದು ಉಪ ಕೃಷಿ ನಿರ್ದೇಶಕರ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಸೆಕೆಂಡರಿ ಕೃಷಿ, ಪಿಎಂಎಫ್ಎಂಇ ಮತ್ತು ಎಐಎಫ್ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ನಿಗಧಿ ಮಾಡುವುದರ ಜೊತೆಗೆ ಸ್ವತಹ ರೈತರೇ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ವ್ಯವಸ್ಥೆ ಆದಾಗ ಮಾತ್ರ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಸ್ವಾವಲಂಬಿಗಳಾಗಿ ಬದುಕಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಪಂಚದಲ್ಲೇ ಭಾರತ ದೇಶ ಅತಿ ಹೆಚ್ಚು ಕೃಷಿ ಮತ್ತು ರೈತರನ್ನು ಹೊಂದಿದ್ದು, ಕೃಷಿ ಶೇ ೮೦ ರಿಂದ ಪ್ರಸ್ತುತ ೬೦ ಕ್ಕೆ ಇಳಿದಿದೆ ಎಂಬುದು ಸರಿಯಾದ ಅಂಕಿಅಂಶವಲ್ಲ, ಈಗ ಕೃಷಿ ಕಾರ್ಮಿಕರ ಸಹಿತ ಶೇ ೭೦ ರಷ್ಟು ಕೃಷಿ ಅವಲಂಬಿತರಿದ್ದಾರೆ, ನಾನೂ ಸಹ ಸಣ್ಣ ಬೆಳೆಗಾರ ಕುಟುಂಬದಿಂದ ಬಂದವನಾಗಿದ್ದೇನೆ ಎಂದು ತಿಳಿಸಿದರು.
ರೈತರು ಕೃಷಿಯಲ್ಲಿ ಮಿಶ್ರ ಬೆಳೆ ಬೆಳೆಯುವ ಜೊತೆಗೆ ಉಪ ಕಸುಬುಗಳಾದ ಹೈನುಗಾರಿಕೆ, ಕುರಿ-ಕೋಳಿ ಸಾಕಾಣಿಕೆ ಮುಂತಾದವುಗಳನ್ನು ಕೈಗೊಳ್ಳುವ ಮೂಲಕ ರೈತರು ಆರ್ಥಿಕ ಸ್ವಾವಲಂಬಿಗಳಾಗಬೇಕು. ಸರ್ಕಾರ ಏನೇ ಕಾರ್ಯಕ್ರಮಗಳನ್ನು ತಂದರೂ ಬರೀ ಆಯೋಜನೆಗೆ ಸೀಮಿತವಾಗದೆ ಜನರ ಕಾರ್ಯಕ್ರಮಗಳಾಗಬೇಕು. ಇಂತಹ ಕಾರ್ಯಾಗಾರಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜನೆಗೊಂಡಾಗ ಮಾತ್ರ ಸರ್ವರನ್ನೂ ತಲುಪುತ್ತದೆ ಎಂದರು.
ಗ್ರಾಮೀಣ ಗುಡಿ ಕೈಗಾರಿಕೆಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದರಿಂದ ಅವರುಗಳು ಆದಾಯವಂತರುಗಳಾಗುತ್ತಾರೆ, ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮೌಲ್ಯವರ್ಧನೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ಈ ಸೆಕೆಂಡರಿ ಕೃಷಿ ಯೋಜನೆಯನ್ನು ಜಾರಿಗೆ ತಂದಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲಿನ ಡೈರಿ ಸ್ಥಾಪಿಸಬೇಕೆಂದು ವಿಧಾನ ಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೇನೆ, ಜಿಲ್ಲೆಯ ರೈತರು ಉತ್ಪಾದಿಸುವ ಹಾಲು ಹಾಸನ ಕೆಎಂಎಫ್ ಸಂಸ್ಥೆಗೆ ಹೋಗುತ್ತಿದ್ದು, ಅವರು ಹೆಚ್ಚು ಹಾಲನ್ನು ಸ್ವೀಕರಿಸುತ್ತಿಲ್ಲ ಈ ನಿಟ್ಟಿನಲ್ಲಿ ರೈತರು ಖಾಸಗಿ ಡೈರಿಗಳಿಗೆ ಹಾಲನ್ನು ಹಾಕುತ್ತಿರುವುದರಿಂದ ಅನ್ಯಾಯವಾಗುತ್ತಿದೆ ಎಂದು ವಿಷಾಧಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿ ರೈತರು ಬೆಳೆ ಬೆಳೆಯುತ್ತಾರೆ ಆದರೆ ಮೌಲ್ಯವರ್ಧನೆ ಉದ್ಯಮಶೀಲರಾಗಲು ಮಾರ್ಗದರ್ಶನ ನೀಡುವ ಸಲುವಾಗಿ ಈ ಅರಿವು ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ರೈತರ ಉತ್ಪನ್ನಗಳಿಗೆ ಕೇಂದ್ರ, ರಾಜ್ಯ ಸರ್ಕಾರ ಮಾರುಕಟ್ಟೆ ದರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ರೈತರ ಬೆಳೆಗಳಿಗೆ ಆದಾಯ ಹೆಚ್ಚಿಸಲು ಮೌಲ್ಯವರ್ಧನೆ ಮಾಡುವುದು ಬಹಳ ಮುಖ್ಯ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಪೂರ್ಣಿಮ ಮಾತನಾಡಿ ರೈತರು ಕೃಷಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಎರಡು ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳನ್ನು ಯವುದೇ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ. ಹಲವು ಯೋಜನೆಗಳು ಈಗಾಗಲೇ ಜಾರಿಯಲ್ಲಿದ್ದು, ಅವುಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿದರು.
ಫಲಾನುಭವಿ ಆಧಾರಿತ ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾರಿಮಾಡುತ್ತಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುವ ಮೂಲಕ ರೈತರು ತಮ್ಮ ಆದಾಯ ಹೆಚ್ಚಿಸಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೀಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಪಿ ಮಂಜೇಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುರೇಶ್, ಸಂಪನ್ಮೂಲ ವ್ಯಕ್ತಿ ಕಾಂತರಾಜ್, ಕೃಷಿ ಪ್ರಶಸ್ತಿ ಪುರಸ್ಕೃತ ಕುಮಾರಸ್ವಾಮಿ, ಬಸವರಾಜು ಹಾಗೂ ರೈತ ಸಂಘದ ಮುಖಂಡರು, ರೈತ ಮಹಿಳೆಯರು ಉಪಸ್ಥಿತರಿದ್ದರು.
District level awareness workshop