ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಅರ್ಥಪೂರ್ಣವಾಗಿ ನಡೆಯುತ್ತಿರುವ ಗಣೇಶೋತ್ಸವಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ ೧೦ ಗಂಟೆ ಒಳಗೆ ಮುಗಿಸುವುದರ ಜೊತೆಗೆ ಸಾಮಾಜಿಕ ಬದ್ದತೆ, ಶಾಂತಿ ಕಾಪಾಡಬೇಕೆಂದು ಸಂಘಟಕರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ ತಿಳಿಸಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಗಣೇಶೋತ್ಸವಗಳ ಸಂಘಟಕರಿಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಗಣೇಶೋತ್ಸವ ಮತ್ತು ಈದ್ಮಿಲಾದ್ ಆಚರಣೆ ಒಟ್ಟಿಗೆ ಒಂದೇ ದಿನ ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಿ ೮ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ನಗರ, ಕಡೂರು, ತರೀಕೆರೆ, ಮೂಡಿಗೆರೆ, ಬಾಳೆಹೊನ್ನೂರು ಇನ್ನು ಮುಂತಾದ ಕಡೆಗಳಲ್ಲಿ ಜರುಗುವ ಕಾರ್ಯಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದು, ಸಂಘಟನೆಗಳ ಮುಖಂಡರು ಸೌಹಾರ್ಧಯುತವಾಗಿ ನಡೆದುಕೊಳ್ಳುತ್ತೇವೆಂದು ತಿಳಿಸಿದ್ದಾರೆ ಎಂದರು.
ಈ ಬಾರಿಯ ಗಣೇಶೋತ್ಸವದಲ್ಲಿ ಇಲಾಖೆ ಮತ್ತು ಜಿಲ್ಲಾಡಳಿತದೊಂದಿಗೆ ಶಾಂತಿಯುತವಾಗಿ ಸಹಕರಿಸುವ ಸಂಘಟನೆಗಳಿಗೆ ಹಾಗೂ ಸಾಂಪ್ರದಾಯಿಕವಾಗಿ ಆಚರಣೆ ಮಾಡಿರುವವರಿಗೆ ಮುಂದಿನ ದಿನಗಳಲ್ಲಿ ಅನುಮತಿ ಮುಂದುವರಿಸಿ ಪ್ರೋತ್ಸಾಹಿಸುತ್ತೇವೆ ಎಂದು ಹೇಳಿದ ಅವರು ಈದ್ಮಿಲಾದ್ ಹಬ್ಬದ ಮೆರವಣಿಗೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೆ.೨೧ ರಂದು ಮುಸ್ಲಿಂ ಮುಖಂಡರ ಸಭೆ ಕರೆದಿದೆ ಎಂದು ತಿಳಿಸಿದರು.
ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಶಾಂತಿ ಕದಡಿ ಕಾನೂನು ಸುವ್ಯವಸ್ಥೆ ಹಾಳುಮಾಡಿ ಶರತ್ತುಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಮುಂದೆ ಅವರಿಗೆ ಗಣೇಶೋತ್ಸವಕ್ಕೆ ಅನುಮತಿ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಗಣಪತಿ ವಿಸರ್ಜನೆ ವೇಳೆ ಯಾವುದೇ ರೀತಿಯ ಅವಘಡಗಳು ಮತ್ತು ವಿದ್ಯುತ್ ಸಮಸ್ಯೆಗಳಾಗದಂತೆ ನಗರಸಭೆ, ಸ್ಥಳೀಯ ಪಂಚಾಯಿತಿ ಹಾಗೂ ಮೆಸ್ಕಾ ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.
ಈ ಬಾರಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿರುವ ಭಾಗದಲ್ಲಿ ಮೊದಲ ದರ್ಜೆ ೨೩ ಅಧಿಕಾರಿಗಳನ್ನು ನಿಯೋಜಿಸುತ್ತಿದ್ದು, ಅಲ್ಲಿ ಅವರು ಕಾನೂನು ಸುವ್ಯವಸ್ಥೆಯನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ ಎಂದು ತಿಳಿಸಿದರು.
ತನಿಖಾ ಠಾಣೆಗಳಲ್ಲಿ ನಿಗಾವಹಿಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಹೊಸದಾಗಿ ಹಲವು ಭಾಗದಲ್ಲಿ ತನಿಖಾ ಠಾಣೆ ಆರಂಭಿಸುವುದಾಗಿ ಹೇಳಿದರು.
ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಎರಡು ಸಮುದಾಯದವರು ಸೇರಿ ಗಣೇಶೋತ್ಸವ ಆಚರಿಸುತ್ತಿದ್ದು ಇಂತಹವರನ್ನು ಪ್ರೋತ್ಸಾಹಿಸುತ್ತೇವೆ, ಯಾವುದೇ ಹಬ್ಬದ ಆಚರಣೆಗಳಿರಲಿ ಎಲ್ಲರೂ ಒಟ್ಟಿಗೆ ಸೇರಿ ಆಚರಣೆ ಮಾಡುವುದರಿಂದ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ರವಾನೆ ಆಗಲಿದ್ದು, ಇದರಲ್ಲಿ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
District Police Chief Dr. Vikram Amate