ಚಿಕ್ಕಮಗಳೂರು: ನಗರದಲ್ಲಿ ಸುಗಮ ಸಂಚಾರ ಮತ್ತು ಅಪಘಾತ ತಡೆಗೆ 15 ಪರಿಹಾರ ಕ್ರಮಗಳನ್ನು ಪೊಲೀಸ್ ಇಲಾಖೆ ಗುರುತಿಸಿದ್ದು, ಈ ಸಂಬಂಧ ನಗರಸಭೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಪತ್ರ ಬರೆದಿದ್ದಾರೆ. ಎಂ.ಜಿ.ರಸ್ತೆ ಮತ್ತು ಐ.ಜಿ. ರಸ್ತೆ ಬದಿಯಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸಲಹೆ ನೀಡಿದ್ದಾರೆ.
‘ಈ ಎರಡು ರಸ್ತೆಯಲ್ಲಿ ಈಗ ಉಚಿತವಾಗಿ ವಾಹನ ನಿಲುಗಡೆಗೆ ಅವಕಾಶ ಇದೆ. ಅಂಗಡಿ ಮಾಲೀಕರು ಮತ್ತು ಕೆಲವು ಸಾರ್ವಜನಿಕರು ಪ್ರತಿದಿನ ಇಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ಗ್ರಾಹಕರಿಗೆ ಮತ್ತು ಬೇರೆ ಸಾರ್ವಜನಿಕರು ವಾಹನಗಳನ್ನು ನಿಲ್ಲಿಸಲು ಆಗುತ್ತಿಲ್ಲ. ಬೇರೆ ವಾಹನಗಳು ರಸ್ತೆಯಲ್ಲೆ ನಿಲ್ಲುತ್ತಿವೆ. ಆದ್ದರಿಂದ ಪಾವತಿಸಿ ವಾಹನ ನಿಲ್ಲುಸುವ ವ್ಯವಸ್ಥೆ ಜಾರಿ ಮಾಡುವುದು ಸೂಕ್ತ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ
ನಗರದಲ್ಲಿ ಹಾದು ಹೋಗಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೀದಿ ದೀಪ ಅಳವಡಿಕೆ ಮಾಡಬೇಕು. ಹನುಮಂತಪ್ಪ ವೃತ್ತದಲ್ಲಿ ಹಾಳಾಗಿರುವ ಸಿಗ್ನಲ್ ಸರಿಪಡಿಸಬೇಕು, ಎಟಿಐ ವೃತ್ತ, ಬೋಳರಾಮೇಶ್ವರ ವೃತ್ತ, ಆಜಾದ್ ಪಾರ್ಕ್ ವೃತ್ತದಲ್ಲಿ ಸಿಗ್ನಲ್ ಅಳವಡಿಕೆ ಮಾಡಬೇಕು. ಎಂ.ಜಿ.ರಸ್ತೆ, ಐ.ಜಿ.ರಸ್ತೆ, ಆರ್.ಜಿ.ರಸ್ತೆ, ಮಾರ್ಕೇಟ್ ರಸ್ತೆ, ಮಲ್ಲಂದೂರು ರಸ್ತೆಗಳಲ್ಲಿ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದನ್ನು ತಪ್ಪಿಸಲು ವಾಹನ ನಿಲುಗಡೆ ತಾಣ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹನುಮಂತಪ್ಪ ವೃತ್ತ, ಕಿರಣ್ ಬೇಕರಿ ಕ್ರಾಸ್, ಟೌನ್ ಕ್ಯಾಂಟೀನ್, ಆಶೀರ್ವಾದ ವೃತ್ತ, ಬಸವನಹಳ್ಳಿ ರಸ್ತೆ, ಪೋಸ್ಟ್ ಆಫೀಸ್ ವೃತ್ತ, ಮಾರ್ಕೇಟ್ ರಸ್ತೆಯ ಹಲವೆಡೆ ರಸ್ತೆಯಲ್ಲಿ ಗುಂಡಿಗಳಿದ್ದು, ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.
ಬೇಲೂರು ರಸ್ತೆ ಮತ್ತು ಲೋಕೋಪಯೋಗಿ ಕಚೇರಿ ಮುಂಭಾಗ ರಸ್ತೆ ಬದಿ ಮೊಬೈಲ್ ಕ್ಯಾಂಟೀನ್ಗಳಿದ್ದು, ಅವುಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿ ಫುಡ್ ಕೋರ್ಟ್ ತೆರೆಯುವ ಅಗತ್ಯವಿದೆ. ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಭಜಕಗಳ ಎರಡೂ ಬದಿಯಲ್ಲಿ ಮರಳು ಮಿಶ್ರಿತ ಮಣ್ಣು ತುಂಬಿಕೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಆಗಾಗ ಸ್ವಚ್ಛಗೊಳಿಸಬೇಕು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸೇರುವ ಎಲ್ಲಾ ಅಡ್ಡರಸ್ತೆಗಳಲ್ಲಿ ರಸ್ತೆ ಉಬ್ಬು ನಿರ್ಮಿಸಬೇಕು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ರಸ್ತೆ ದಾಟಲು ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಮಲ್ಲಂದೂರು ರಸ್ತೆಯಲ್ಲಿರುವ ಖಾಸಗಿ ಬಸ್ ನಿಲ್ದಾಣಕ್ಕೆ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಸ್ಪಿ ಸಲಹೆ ನೀಡಿದ್ದಾರೆ. ವಾರದ ಸಂತೆ ನಗರದ ಮಧ್ಯ ಭಾಗದಲ್ಲೇ ನಡೆಯುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಸಂತೆಯನ್ನು ಬೇರೆಡೆಗೆ ಸ್ಥಳಾಂತರ ಮಾಡುವಂತೆ ಎಸ್ಪಿ ಸಲಹೆ ನೀಡಿದ್ದಾರೆ.
ತಳ್ಳುವ ಗಾಡಿಗಳು ರಸ್ತೆಯ ಮಧ್ಯದಲ್ಲೇ ನಿಲ್ಲುತ್ತಿದ್ದು, ಅವುಗಳು ಮುಖ್ಯ ರಸ್ತೆಯಲ್ಲಿ ಸಂಚರಿಸದಂತೆ ನಿರ್ಬಂಧಿಸಬೇಕು. ನಗರದ ಮಧ್ಯಭಾಗದಲ್ಲಿ ಲಾರಿ ನಿಲುಗಡೆ ತಾಣವಿದ್ದು, ಇದರಿಂದ ಕೆ.ಎಂ.ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಲಾರಿ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದೂ ತಿಳಿಸಿದ್ದಾರೆ.
Advise to arrange paid parking