ಚಿಕ್ಕಮಗಳೂರು: ನಗರದ ನಾಗರೀಕರಿಗೆ ನಗರಸಭೆಯಿಂದ ಪಾರದರ್ಶಕವಾದ ಜನಸ್ನೇಹಿ ಆಡಳಿತ ಸಿಗುವಂತಾಗಬೇಕು. ಅದಕ್ಕೆ ಪೌರ ನೌಕರರ ಸಹಕಾರ ಅತೀಮುಖ್ಯ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಅವರು ಶನಿವಾರ ನಗರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೬ ನೇ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಶಾಸಕರಾಗಿ ಸಹ ಜನಸ್ನೇಹಿ ಆಡಳಿತಕ್ಕೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ಸಿದ್ಧನಿದ್ದೇನೆ. ಅದಕ್ಕೆ ಸೂಕ್ತ ಸ್ಪಂದನೆ ನೀಡಬೇಕು ಎಂದು ಪೌರ ನೌಕರರಲ್ಲಿ ಮನವಿ ಮಾಡುತ್ತೇನೆ ಎಂದರು.
ಸೈನಿಕರು, ಪೊಲೀಸರಿಗಿರುವಷ್ಟೇ ಗೌರವ ಪೌರ ನೌಕರರಿಗೂ ಇದೆ. ಇಡೀ ನಗರದ ಜನತೆ ಆರೋಗ್ಯವಾಗಿರಲು ಪೌರ ಕಾರ್ಮಿಕರೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಚಿಕ್ಕಮಗಳೂರಿನ ಜನ ನಮಗೆ ಜವಾಬ್ದಾರಿಯುತ ಸ್ಥಾನ ನೀಡಿದ್ದರೂ, ನಾನೂ ಸಹ ನಗರಸಭೆ ನೌಕರರೊಬ್ಬರ ಪುತ್ರ ಎನ್ನುವ ಹೆಮ್ಮೆ ಇದೆ ಎಂದರು.
ನಗರದ ಇಂದಿರಾಗಾಂಧಿ ಬಡಾವಣೆಯಲ್ಲಿ ಪೌರ ಕಾರ್ಮಿಕರಿಗಾಗಿ ೭೪ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಅದಕ್ಕೆ ನಗರೋತ್ಥಾನ ಯೋಜನೆಯಡಿ ಪ್ರತಿ ಮನೆಗೆ ೧.೫೦ ಲಕ್ಷ ರೂ. ಪ್ರೋತ್ಸಾಹ ಧನ ನೀಡಲು ಆಯುಕ್ತರಿಗೆ ಸೂಚಿಸಿದ್ದೇವೆ. ಇದಲ್ಲದೆ ನಗರದ ಶಂಕರಪುರ ಬಡಾವಣೆಯಲ್ಲಿ ಪೌರ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೇ ಖಾಯಂಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು
ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗಾರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದು ನಗರ, ಪಟ್ಟಣದ ಜೀವನಾಡಿಗಳು ಪೌರ ಕಾರ್ಮಿಕರು. ಒಂದು ನಗರದ ಆರೋಗ್ಯ, ಸ್ವಚ್ಛತೆ, ಸುಸ್ಥಿತಿ ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಅಲ್ಲಿನ ಪೌರ ಕಾರ್ಮಿಕರು ನಿರ್ವಹಿಸುವ ಕೆಲಸ, ಕಾರ್ಯಗಳೇ ನಿದರ್ಶನ ಎಂದರು.
ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡವರಿಗೆ ನೆರವಾಗುವ ರೀತಿಯಲ್ಲಿ ಜನಸಾಮಾನ್ಯರ ಮನಸ್ಥಿತಿಯೂ ಬದಲಾಗಬೇಕಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ನಿರ್ವಹಣೆ ಸೇರಿದಂತೆ, ಕಸದ ಬೇರ್ಪಡಿಸುವಿಕೆಯಂತಹ ಕಾರ್ಯದಲ್ಲಿ ಪೌರ ಕಾರ್ಮಿಕರೊಂದಿಗೆ ಸಹಕರಿಸಬೇಕು. ನಗರ ವಿಸ್ತಾರಗೊಳ್ಳುತ್ತಿದೆ. ಪ್ರವಾಸೋದ್ಯಮ ಬೆಳೆಯುತ್ತಿದೆ. ಈ ಕಾರಣಕ್ಕೆ ಸ್ವಚ್ಛತೆಯೂ ಸುಧಾರಿಸಬೇಕಿದೆ. ಅದಕ್ಕೆ ಸರ್ಕಾರ, ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನಿಡಲು ಸಿದ್ಧವಿದೆ ಎಂದರು.
ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ ಆಮಟೆ ಮಾತನಾಡಿ, ತಂತ್ರಜ್ಞಾನಗಳನ್ನು ಬಳಸಿಕೊಂಡು ಅಭಿವೃದ್ಧಿಯಲ್ಲಿ ಇನ್ನೂ ಒಂದು ಹೆಚ್ಚೆ ಮುಂದೆ ಹೋಗುವ ಮೂಲಕ ಬೇರೆ ನಗರಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಪೌರ ಕಾರ್ಮಿಕರು ಶ್ರಮಿಸಬೇಕು ಅದಕ್ಕೆ ಅಗತ್ಯವಿರುವ ಸಹಕಾರ ಇರುತ್ತದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರಾದರೂ ಸ್ವಚ್ಛತೆ ವಿಚಾರದಲ್ಲಿ ದೂರುಗಳಿಗೆ ಆಸ್ಪದವಿಲ್ಲ. ಆದರೆ ಗಿರಿ ಭಾಗದಲ್ಲಿ ಸ್ವಲ್ಪ ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ದೂರುಗಳಿವೆ ಅದನ್ನು ಪ್ರವಾಸಿಗರೇ ಅರ್ಥಮಾಡಿಕೊಂಡು ಸಹಕರಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ ತಮ್ಮ ಅಧಿಕಾರವಧಿಯಲ್ಲಿ ಪೌರ ಕಾರ್ಮಿಕರು, ನೌಕರರು ಅತ್ಯುತ್ತಮ ಸಹಕಾರ ನೀಡಿದ್ದಾರೆ. ಕೊರೊನಾ ಸಂಕಷ್ಟದಲ್ಲೂ ತಮ್ಮ ಆರೋಗ್ಯದವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಹಕರಿಸಿದ್ದಾರೆ ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜು ಸ್ವಾಗತಿಸಿದರು. ನಗರಸಭೆ ಉಪಾಧ್ಯಕ್ಷ ಅಮೃತ್ ಚನ್ನಕೇಶವ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ನಾಗರತ್ನ, ಪೌರನೌಕರರ ಸಂಘದ ಗೌರವಾಧ್ಯಕ್ಷ ನಾಗರಾಜು, ಪೌರ ನೌಕರರ ಸಂಘದ ಗೌರವಾಧ್ಯಕ್ಷ ರಮೇಶ್ನಾಯ್ಡು, ಶಾಖಾ ಅಧ್ಯಕ್ಷ ಶ್ರೀನಿವಾಸ್ ಜಿಲ್ಲಾ ಕಾರ್ಯದರ್ಶಿ ಶಿವಾನಂದಪ್ಪ, ಜಿಲ್ಲಾ ಉಪಾಧ್ಯಕ್ಷ ಸುನೀಲ್ಕುಮಾರ್, ಖಜಾಂಚಿ ಸತೀಶ್, ಕೃಷ್ಣಮೂರ್ತಿ, ಮಂಜುನಾಥ್, ನಾಗರಾಜ್, ಶ್ರೀನಿವಾಸ್, ಕೃಷ್ಣಮೂರ್ತಿ, ಭರತ್ನಾಯ್ಕ, ವಿವೇಕ್, ಮುರಗೇಶ್, ಇಂಜಿನಿಯರ್ಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ತಾಲ್ಲೂಕು ಕಚೇರಿಯಿಂದ ನಗರಸಭೆ ವರೆಗೆ ಪೌರ ಕಾರ್ಮಿಕರು ಮೆರವಣಿಗೆ ನಡೆಸಿದರು. ಈ ವೇಳೆ ಅಧ್ಯಕ್ಷರು, ಸದಸ್ಯರು, ಆಯುಕ್ತರು ಸೇರಿದಂತೆ ನೌರರು ಕುಣಿದು ಸಂಭ್ರಮಿಸಿದರು.
16th Civic Workers Day Program