ಚಿಕ್ಕಮಗಳೂರು: ಅರಣ್ಯ ಇಲಾಖೆ ಭದ್ರಾ ಅಭಯಾರಣ್ಯದ ಮುತ್ತೋಡಿ ವಿಭಾಗದಲ್ಲಿ ಕಾಡಾನೆಗಳ ನಿಯಂತ್ರಣಕ್ಕೆ ಖಾಯಂ ಆನೆ ಶಿಬಿರ ವ್ಯವಸ್ಥೆಗೊಳಿಸಲು ಮುಂದಾಗಿ ಪ್ರಸ್ತಾವನೆ ಕಳುಹಿಸಿರುವುದು ಸೂಕ್ತವಲ್ಲ ಎಂದು ಪರಿಸರ ಸಂಘಟನೆಗಳು ತಿಳಿಸಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ಭದ್ರಾ ವೈಲ್ಡ್ಲೈಫ್ ಕನ್ಸರ್ವೇಶನ್ ಟ್ರಸ್ಟ್ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯಶ್ರೀದೇವ್ ಹುಲಿಕೆರೆ, ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಸೇರಿದಂತೆ ಹಲವು ಕಡೆ ಕಾಡಾನೆ ಹಾಗೂ ಮಾನವ ಸಂಘರ್ಷ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ನಾಲ್ಕೈದು ಸಾಕಾನೆಗಳಿಂದ ಕೂಡಿದ ಆನೆ ಶಿಬಿರವೊಂದನ್ನು ಮುತ್ತೋಡಿ ಕಾಡಿನೊಳಗೆ ಮಾಡಲು ಹೊರಟಿರುವುದು ಆಕ್ಷೇಪಾರ್ಹ ಎಂದಿದ್ದಾರೆ.
ಭದ್ರಾ ಅಭಯಾರಣ್ಯವನ್ನೇ ಈಗಾಗಲೇ ಕಾಡಾನೆಗಳು ತಮ್ಮ ಆವಾಸ ಸ್ಥಾನವಾಗಿ ಮಾಡಿಕೊಂಡು ಸುತ್ತಮುತ್ತಲಲ್ಲಿ ಸಂಚರಿಸುತ್ತಿವೆ. ಅಲ್ಲಿ ಸಾಕಿದ ಆನೆಗಳ ಶಿಬಿರವನ್ನು ಮಾಡಿದಲ್ಲಿ ಅವುಗಳಿಗೆ ನಿತ್ಯ ಆಹಾರ ಒದಗಿಸಲು ಮತ್ತೆ ಕಾಡಿನ ಮರಗಳನ್ನೇ ಕಡಿದು ಸೊಪ್ಪನ್ನು ನೀಡಬೇಕಾಗುತ್ತದೆ. ಈ ಆನೆಗಳ ನಿರ್ವಹಣೆಗೆ ಮೂರ್ನಾಲ್ಕು ಮಂದಿ ಮಾವುತರು ಹಾಗೂ ಅವರ ಕುಟುಂಬಕ್ಕೂ ನೆಲೆ ಕಲ್ಪಿಸಬೇಕಾಗುವುದು. ಇದು ಅಭಯಾರಣ್ಯದಲ್ಲಿ ಮತ್ತೆ ಜನವಸತಿ ಹಾಗೂ ಹಲವು ರೀತಿಯ ಚಟುವಟಿಕೆಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಹಿಂದೊಮ್ಮೆ ಈ ರೀತಿಯ ಆನೆ ಶಿಬಿರವನ್ನು ಮುತ್ತೋಡಿಯಲ್ಲಿ ಮಾಡಲು ಮುಂದಾದಾಗ ಬಂದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಇಲಾಖೆ ಅದನ್ನು ಕೈಬಿಟ್ಟಿತ್ತು. ಒಮ್ಮೆ ಆನೆ ಶಿಬಿರ ಮಾಡಿದಲ್ಲಿ ಅಭಯಾರಣ್ಯ ನೋಡಲು ಬರುವ ಪ್ರವಾಸಿಗರಿಗೆ ಇದೊಂದು ರೀತಿ ಮೋಜಿಗೆ ದಾರಿ ತೆರೆಯುತ್ತದೆ. ಈ ಆನೆಗಳನ್ನು ಪ್ರತಿನಿತ್ಯ ಆರೈಕೆ ಮಾಡಲು, ಅವುಗಳ ಮೈತೊಳೆಯಲು ಈ ಪ್ರದೇಶವನ್ನೇ ಉಪಯೋಗಿಸುವುದು ಒಂದು ರೀತಿಯಲ್ಲಿ ಸಕ್ರೆಬೈಲಿನಲ್ಲಿರುವ ಆನೆ ಶಿಬಿರದಂತಾಗಿ ಪ್ರವಾಸಿಗರನ್ನು ಸೆಳೆಯಲು ಮತ್ತೊಂದು ದಾರಿ ನಿರ್ಮಿಸಿದಂತಾಗುತ್ತದಲ್ಲದೆ, ವನ್ಯಜೀವಿಗಳ ನಿರಾತಂಕ ಬದುಕಿಗೂ ಅಡಚಣೆ ಉಂಟು ಮಾಡುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಶಿವಮೊಗ್ಗ ಬಳಿ ಸಕ್ರೆಬೈಲಿನಲ್ಲಿ ಆನೆ ಶಿಬಿರವಿದ್ದು, ಅಲ್ಲಿಂದಲೇ ಇಲ್ಲಿ ಕಾಡಾನೆ ನಿಯಂತ್ರಣ ಕಾರ್ಯಾಚರಣೆ ಅನಿವಾರ್ಯವಾದಾಗ ಆನೆಗಳನ್ನು ತಂದು ಕಾರ್ಯಾಚರಣೆ ಮುಂದುವರಿಸಬಹುದು. ಇಲಾಖೆ ಈ ರೀತಿ ಯೋಚಿಸದೆ ಮತ್ತೊಂದು ಹೊಸದಾಗಿ ಆನೆ ಶಿಬಿರವನ್ನು ಮಾಡುವ ಅವಶ್ಯಕತೆ ಇಲ್ಲ. ಜೊತೆಗೆ ಆರ್ಥಿಕ ಭಾರವನ್ನು ಹೊರುವುದನ್ನು ತಪ್ಪಿಸಬಹುದು ಎಂದು ತಿಳಿಸಿದ್ದಾರೆ.
ಇಲಾಖೆ ಆನೆ ಶಿಬಿರವನ್ನು ಮಾಡುವ ಬದಲು ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿ ಆನೆಗಳು ಹಾಗೂ ಇತರ ವನ್ಯಜೀವಿಗಳಿಂದ ಕೂಡಿರುವ ಭದ್ರಾ ಅಭಯಾರಣ್ಯ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನ ಹಾಗೂ ಮಲೆನಾಡು ತಾಲ್ಲೂಕುಗಳಲ್ಲಿರುವ ವನ್ಯಜೀವಿಗಳ ನಿರ್ವಹಣೆ ಹಾಗೂ ನಿಯಂತ್ರಣಕ್ಕಾಗಿ ಅತ್ಯಗತ್ಯವಾಗಿ ಬೇಕಾಗಿರುವ ಓರ್ವ ಪಶುವೈದ್ಯರನ್ನು ನೇಮಿಸುವುದು ಅತ್ಯಂತ ತುರ್ತು ಅಗತ್ಯವಾಗಿದೆ. ಇಲಾಖೆ ಆನೆ ಶಿಬಿರ ಮಾಡುವುದನ್ನು ಕೈಬಿಟ್ಟು ಪಶುವೈದ್ಯರನ್ನು ನೇಮಿಸಲು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
Environmental organizations oppose elephant camp in Muthodi