ಚಿಕ್ಕಮಗಳೂರು: ಇಸ್ಕಾನ್ ಸಂಸ್ಥೆಗೆ ಮನುಷ್ಯರ ಮೇಲಾಗಲೀ, ಗೋವುಗಳ ಮೇಲಾಗಲೀ ಯಾವುದೇ ಕಾಳಜಿ ಇಲ್ಲ, ಇಸ್ಕಾನ್ ಸಂಸ್ಥೆಯ ಮೇಲೆ ಮೇನಕಾ ಗಾಂಧಿ ಅವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿದ್ದು, ಮೇನಾಕಾ ಗಾಂಧಿ ವಿರುದ್ಧ ೧೦೦ ಕೋ. ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಇಸ್ಕಾನ್ ಸಂಸ್ಥೆ ನೀಡಿರುವ ಹೇಳಿಕೆ ಕೇವಲ ಬೆದರಿಸುವ ತಂತ್ರವಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ಸಂಚಾಲಕ ಹಾಗೂ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ ಅಂಗೀರಸ ತಿಳಿಸಿದರು.
ಗೋವುಗಳ ಸಂರಕ್ಷಕರೆಂದು ಹೇಳಿಕೊಳ್ಳುವವರು ಮೇನಕಾಗಾಂಧಿ ಪರ ಧ್ವನಿ ಎತ್ತಬೇಕಿದೆ ಎಂದು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದಲ್ಲಿ ಅಧಿಕಾರಕ್ಕೆ ಬಂದ ಅನೇಕ ರಾಜಕಾರಣಿಗಳಲ್ಲಿ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ ರಾಜಕಾರಣಿಯಾಗಿ ಗಮನ ಸೆಳೆದವರು ಮೇನಕಾ ಗಾಂಧಿ ಎಂದು ಹೇಳಿದರು.
ಅವರ ಹೋರಾಟದ ಫಲವಾಗಿ ಭಾರತ ಸರಕಾರ ಪ್ರಾಣಿಗಳ ಸಂರಕ್ಷಣೆಗಾಗಿ ಅನೇಕ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದಿದೆ. ಗೋವು ಸೇರಿದಂತೆ ಬೀದಿ ನಾಯಿಗಳು, ವನ್ಯಜೀವಿಗಳು, ಸರ್ಕಸ್ ಪ್ರಾಣಿಗಳು ಪರವಾಗಿ ಧ್ವನಿ ಎತ್ತಿದ್ದಲ್ಲದೇ ಸರಕಾರಗಳ ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿ ಅದರಲ್ಲಿ ಜಯ ಸಾಧಿಸಿ ಮೂಕ ಪ್ರಾಣಿಗಳ ಆರ್ತನಾದಕ್ಕೆ ಧ್ವನಿಯಾದವರು ಮೇನಕಾ ಗಾಂಧಿ. ಈ ಕಾರಣಕ್ಕೆ ಪರಿಸರ, ಸಾಕು ಪ್ರಾಣಿಗಳು ಮತ್ತು ವನ್ಯಜೀವಿಗಳ ಬಗ್ಗೆ ಕಾಳಜಿ ಹೊಂದಿರುವವರು ಮೇನಕಾ ಗಾಂಧಿ ಅವರಿಗೆ ಋಣಿಯಾಗಿರಲೇಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಮೇನಕಾ ಗಾಂಧಿ ಅವರು ನೀರುವ ಒಂದು ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ದೇಶದ ಹೆಸರಾಂತ ಶ್ರೀಮಂತ ಸಂಸ್ಥೆಯಾಗಿರುವ ಇಸ್ಕಾನ್ ಸಂಸ್ಥೆ ಗೋವುಗಳ ಬಗ್ಗೆ ಹೊಂದಿರುವ ನಿಲುವಿನ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ. ಇಸ್ಕಾನ್ ಸಂಸ್ಥೆ ಗೋವುಗಳನ್ನು ಕಸಾಯಿಕಾನೆಗಳಿಗೆ ನೀಡುತ್ತಿದೆ ಎಂಬ ಅವರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದರು.
ಇಸ್ಕಾನ್ ಸಂಸ್ಥೆ ಎಂದೂ ಪ್ರಾಣಿ, ಪರಿಸರದ ಬಗ್ಗೆ ಕಾಳಜಿ ತೋರಿಲ್ಲ. ಈ ಸಂಸ್ಥೆಗೆ ಭಾರತ ಹಾಗೂ ಪ್ರಪಂಚದಾದ್ಯಂತ ತನ್ನ ಸಂಸ್ಥೆಗಳನ್ನು ಹೆಚ್ಚಿಸಿಕೊಳ್ಳುವ ಹಪಾಹಪಿ ಇದೆಯೇ ಹೊರತು ಗೋವು ಹಾಗೂ ಮನುಷ್ಯರ ಮೇಲೆ ಕಾಳಜಿಯೇ ಇಲ್ಲ. ಗೋವು ಈ ಸಂಸ್ಥೆಯ ಆಧ್ಯತೆಯೇ ಅಲ್ಲ. ಗೋವುಗಳ ಮೇಲಿನ ದೌರ್ಜನ್ಯದ ವಿರುದ್ಧ ಈ ಸಂಸ್ಥೆ ಎಂದೂ ಧ್ವನಿ ಎತ್ತಿದ ಉದಾಹರಣೆಯೇ ಇಲ್ಲ ಎಂದು ಹೇಳಿದರು.
ಇಂತಹ ಸಂಸ್ಥೆ ಧರ್ಮ, ಗೋವಿನ ಹೆಸರಿನಲ್ಲಿ ತನ್ನ ಶಾಖೆಗಳನ್ನು ವಿಸ್ತರಿಸಿಕೊಳ್ಳುವ ಹುನ್ನಾರ ಹೊಂದಿದೆಯೇ ಹೊರತು. ಗೋವುಗಳ ಸಂರಕ್ಷಣೆಯಲ್ಲಿ ಇಸ್ಕಾನ್ ಸಂಸ್ಥೆಯ ಕೊಡುಗೆ ಏನೂ ಇಲ್ಲ ಎಂದ ಅವರು ಮೇನಕಾ ಗಾಂಧಿ ಇಸ್ಕಾನ್ ಸಂಸ್ಥೆ ಗೋವುಗಳ ಬಗ್ಗೆ ಹೊಂದಿರುವ ನಿಲುವಿನ ವಿರುದ್ಧ ಮಾತನಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ಮೇನಕಾ ವಿರುದ್ಧ ೧೦೦ ಕೋ. ರೂ. ಮಾನನಷ್ಟೆ ಮೊಕದ್ದಮೆ ಹೂಡಿದ್ದು, ಇದು ಅವರನ್ನು ಬೆದರಿಸುವ ತಂತ್ರವಾಗಿದೆ ಎಂದರು.
ಗೋವು ಸಂರಕ್ಷಕರು ಎಂದು ಹೇಳಿಕೊಳ್ಳುವವರು ಇದುವರೆಗೂ ಮೇನಕಾ ಪರ ಧ್ವನಿ ಎತ್ತದಿರುವುದು ವಿಪರ್ಯಾಸ ಎಂದ ಅವರು, ದೇಶದಲ್ಲಿ ಗೋವುಗಳು, ಹೆಣ್ಣು ಮಕ್ಕಳು ಹಾಗೂ ತಳ ಸಮುದಾಯದ ಜನರ ಮೇಲೆ ನಡೆದಿರುವಷ್ಟು ದೌರ್ಜನ್ಯ ಮತ್ತೆಲ್ಲೂ ನಡೆದಿಲ್ಲ. ಇನ್ನಾದರೂ ಧರ್ಮ, ಗೋವಿನ ಹೆಸರಿನ ಮೇಲೆ ರಾಜಕಾರಣ ಮಾಡುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ದೂರಿದರು.
ಗೋವುಗಳ ಬಗ್ಗೆ ಮಾತನಾಡುವ, ಗೋ ಸಂರಕ್ಷಕರು ಎನ್ನುವ ಅನೇಕ ಧಾರ್ಮಿಕ ಸಂಸ್ಥೆಗಳು ಕದ್ದುಮುಚ್ಚಿ ಗೋವುಗಳನ್ನು ಕಾಡಿಗೆ ಬಿಡುತ್ತಿರುವ ಘಟನೆಗಳು ಎಲ್ಲೆಡೆ ನಡೆಯುತ್ತಿವೆ. ಇಂತಹ ಸಂಸ್ಥೆಗಳಿಗೆ ನಿಜವಾಗಿಯೂ ಗೋವುಗಳ ಬಗ್ಗೆ ಕಾಳಜಿ ಇಲ್ಲ. ಕಾಳಜಿ ಹೊಂದಿರುವ ಗೋ ಸೇವಾ ಸಂಸ್ಥೆಗಳು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿವೆ. ಇಂತಹ ಗೋಶಾಲೆಗಳ ನೆರವಿಗೆ ಯಾರೂ ಮುಂದಾಗುತ್ತಿಲ್ಲ. ಜಿಲ್ಲೆಯಲ್ಲಿರುವ ಕಾಮಧೇನು ಗೋಸೇವಾ ಟ್ರಸ್ಟ್ ಗೋವುಗಳ ಬಗ್ಗೆ ನೈಜ ಕಾಳಜಿ ಹೊಂದಿರುವ ಸಂಸ್ಥೆಯಾಗಿದ್ದು, ಈ ಸಂಸ್ಥೆ ಮೇನಕಾ ಗಾಂಧಿ ಪರ ಸದಾ ಧ್ವನಿ ಎತ್ತಲಿದೆ ಎಂದರು.
Kamadhenu Go Seva Trust Chairman Nagesh Angirasa