ಚಿಕ್ಕಮಗಳೂರು: ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ಆರೋಗ್ಯ ನೋಡಿಕೊಳ್ಳುವುದರ ಜೊತೆಗೆ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ಶನಿವಾರ ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ಕಾರ್ಯಾಲಯ, ಜಿಲ್ಲಾ ಆಸ್ಪತ್ರೆ, ಕೌಶಲ್ಯ ಅಭಿವೃದ್ಧಿ ಉದ್ಯಮ ಶೀಲತೆ, ಜೀವನೋಪಾಯ ಇಲಾಖೆ ಹಾಗೂ ಎಲ್ಲಾ ಸ್ವ-ಸಹಾಯ ಸಂಘಗಳ ವತಿಯಿಂದ ಹಮ್ಮಿಕೊಳ್ಳಲಾದ ಬೀದಿ ಬದಿ ವ್ಯಾಪಾರಸ್ಥರು ಮತ್ತು ಅವರ ಕುಟುಂಬದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವರ್ಷಕ್ಕೆ ಒಮ್ಮೆಯಾದರು, ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ನಗರಸಭೆ ವತಿಯಿಂದ ಬೀದಿ ಬದಿ ವ್ಯಾಪಾರಸ್ಥರಿಗೆ ಮತ್ತು ಅವರ ಕುಟುಂಬಸ್ಥರಿಗೆ ಆರೋಗ್ಯ ತಪಾಸಣಾ ಏರ್ಪಡಿಸಿದ್ದು, ಈ ಶಿಬಿರದಲ್ಲಿ ಬಿ.ಪಿ, ಶುಗರ್ ಮತ್ತು ಇತರೆ ಆರೋಗ್ಯದ ಬಗ್ಗೆ ತಪಾಸಣೆ ನೆಡೆಸಿ, ಸೂಕ್ತ ಸಲಹೆಗಳನ್ನು ವೈದ್ಯರಿಂದ ತಿಳಿಸಲಾಗುವುದು ಎಂದರು.
ನಗರಸಭೆ ಆಯುಕ್ತ ಬಸವರಾಜ್ ಮಾತನಾಡಿ ಬೀದಿ ಬದಿ ವ್ಯಾಪಾರಸ್ಥರು ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವುದರ ಜೊತೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಪ್ಲಾಸ್ಟಿಕನ್ನು ಬಳಕೆ ಮಾಡದಂತೆ ತಿಳಿಸಿದರು.
ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಮೋಹನ್ ಮಾತನಾಡಿ ಪ್ರತಿಯೊಬ್ಬರು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು ಉತ್ತಮ ಆರೋಗ್ಯ ಹೊಂದಬೇಕು, ಯಾವುದೇ ಸಣ್ಣ ಸಮಸ್ಯೆ ಇದ್ದರು, ತಕ್ಷಣವೇ ಆಸ್ಪತ್ರೆಗೆ ಆಗಮಿಸಿ ವೈದ್ಯರಿಂದೆ ಸೂಕ್ತ ಸಲಹೆ ಪಡೆದಾಗ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ನಗರಸಭೆ ಎಇಇ ಲೋಕೇಶ್, ಯೋಜನೆಯ ಸಿಎಂಎಂ ಹರ್ಷ, ಸಿ.ಎಂಓ ಕಲಾವತಿ, ಸಿಇಓ ಚಂದ್ರಶೇಖರ್, ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Family free health checkup camp program held at Ambedkar Bhavan