ಚಿಕ್ಕಮಗಳೂರು: ದೈಹಿಕ ಹಾಗೂ ಮಾನಸಿಕ ಆರೋಗ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನೂ ಕಾಪಾಡಿಕೊಂಡು ಹೋಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್.ಸೋಮ ತಿಳಿಸಿದರು.
ಅವರು ಮಂಗಳವಾರ ನಗರದ ಟಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾನಾ ಕಾರಣಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಉದ್ಯೊಗಾಧಾರಿತ ಶಿಕ್ಷಣದಲ್ಲಿ ಒತ್ತಡವೂ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಾವೇ ಅರಿವು ಮೂಡಿಸಿಕೊಳ್ಳಬೇಕು. ಎಲ್ಲದನ್ನೂ ಇಲಾಖೆಗಳೇ ಮಾಡಬೇಕೆಂದಿಲ್ಲ. ಸಾರ್ವಜನಿಕರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಯುವಶಕ್ತಿಗೆ ಎಲ್ಲಾ ವಿಷಯ ಗ್ರಹಿಸುವ ಶಕ್ತಿ ಇದೆ. ಅದನ್ನು ಪ್ರಚಾರ ಪಡಿಸಿ ಕಾರ್ಯರೂಪಕ್ಕೆ ತರುವ ಶಕ್ತಿಯೂ ಇದೆ. ಈ ಕಾರಣಕ್ಕೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ಇಂತಹ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗಬಾರದು ಅದರ ಮೌಲ್ಯಗಳನ್ನು ಪ್ರತಿನಿತ್ಯ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವನ್ನು ಸರಿಯಾದ ರೀತಿ ಉಪಯೋಗಿಸಿಕೊಂಡಲ್ಲಿ ಮುಂದಿನ ಜೀವನ ಗೋಲ್ಡನ್ ಲೈಫ್ ಆಗುತ್ತದೆ ಅದಕ್ಕಾಗಿಯೇ ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎನ್ನುತ್ತಾರೆ. ಆದರೆ ಬಹಳ ಮಂದಿ ವಿದ್ಯಾರ್ಥಿ ಜೀವನ ಇರುವುದು ಜಾಲಿ ಮಾಡಲಿಕ್ಕೆ, ಸುತ್ತಾಡಲಿಕ್ಕೆ, ಹೋರೋಇಸಂ ತೋರಿಸಲಿಕ್ಕೆ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದರು.
ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಎಚ್.ಕೆ.ಮಂಜುನಾಥ್ ಮಾತನಾಡಿ, ಮಾನಸಿಕ ಆರೋಗ್ಯವು ಸಾರ್ವತ್ರಿಕ ಮಾನವ ಹಕ್ಕು ಎನ್ನುವ ವಿಷಯದ ಮೇಲೆ ವಿಶ್ವ ಮಾನಸಿಕೆ ಆರೋಗ್ಯ ದಿನ ನಡೆಸಲಾಗುತ್ತಿದೆ ಎಂದರು.
ವಾರದಲ್ಲಿ ಕನಿಷ್ಠ ೫ ದಿನಗಳ ಕಾಲ, ಪ್ರತಿನಿತ್ಯ ೩೦ ನಿಮಿಷ ವ್ಯಾಯಾಮ ಮಾಡಬೇಕು. ಯೋಗವನ್ನು ಅಭ್ಯಾಸ ಮಾಡಬೇಕು, ಸ್ನೇಹಿತರ ಜೊತೆ ಒಳ್ಳೆಯ ಕಾಲ ಕಳೆಯಬೇಕು. ನಿಸರ್ಗದ ಜೊತೆ ಉತ್ತಮ ಚಟವಟಿಕೆ ಇಟ್ಟುಕೊಳ್ಳಬೇಕು. ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯಮವಾಗಿ ಸಾಮಾಜಿಕ ಜಾಲತಾಣ ಮತ್ತು ಟಿವಿಗಳಿಂದ ದೂರ ಇರಬೇಕು. ತಂಬಾಕು, ಮದ್ಯಪಾನ ಇತರೆ ದುಶ್ಚಟಗಳಿಂದ ದೂರ ಇರಬೇಕು ಎಂದು ತಿಳಿಸಿದರು.
ಟಿಎಂಎಸ್ ಅಧ್ಯಕ್ಷೆ ಗೀತಾ ಎಂ.ಎಲ್.ಮೂರ್ತಿ. ಮಾತನಾಡಿ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳೊಂದಿಗೆ ಸ್ನೇಹದಿಂದ ವರ್ತಿಸುವುದರ ಜೊತೆಗೆ ಉನ್ನತ ಸ್ಥಾನವನ್ನೇರಲು ಬೇಕಾದ ತಯಾರಿ ನಡೆಸಿ ಉತ್ತಮ ವ್ಯಾಸಂಗ ಮಾಡಬೇಕು, ಪೋಷಕರಿಗೆ ಒಳ್ಳೆಯ ಹೆಸರನ್ನು ತಂದುಕೊಡಬೇಕು, ಸಮಾಜಕ್ಕೆ ತನ್ನಿಂದಾಗುವ ಅಳಿಲು ಸೇವೆಯನ್ನು ಮಾಡುವ ಮನೋಭಾವವನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಘಟಕ ಅಧಿಕಾರಿ ಡಾ.ಬಾಲಕೃಷ್ಣ.ಟಿ.ಪಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಶಿಕಲಾ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸೀಮಾ, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ವಿನಯ್, ನಿರ್ದೇಶಕರಾದ ತಾರಅರಸ್, ಕಾರ್ಯದರ್ಶಿ ಅರ್ಪಿತಾ, ಸಂಗೀತ.ಇ.ಎಲ್, ಉಪನ್ಯಾಸಕರಾದ ಎಂ.ಬಿ.ಕಟಗಿ, ಪ್ರಾಂಶುಪಾಲರಾದ ಇಂದ್ರೇಶ್, ನವೀನ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
World Mental Health Day-2023 Programme