ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ಸರಕಾರ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹೈಕಮಾಂಡ್ ಸೂಚನೆಯಂತೆ ರಾಜ್ಯದ ಖಜಾನೆ ಲೂಟಿ ಮಾಡಿ ಸಾವಿರಾರು ಕೋಟಿ ಹಣವನ್ನು ಸಂಗ್ರಹಿಸಿದೆ. ಇತ್ತೀಚೆಗೆ ಸಿಎಂ, ಡಿಸಿಎಂ ಆಪ್ತನಾಗಿರುವ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿ. ಈ ಪ್ರಕರಣವನ್ನು ಸಿಬಿಐ ಮೂಲಕ ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಬಿಜೆಪಿ ಪಕ್ಷದ ಜಿಲ್ಲಾ ಮುಖಂಡರು ನಗರದಲ್ಲಿ ಧರಣಿ ನಡೆಸಿದರು.
ಸೋಮವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ನೇತೃತ್ವದಲ್ಲಿ ಸಮಾವೇಶಗೊಂಡ ಮುಖಂಡರು, ಕಾರ್ಯಕರ್ತರು, ರಾಜ್ಯ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ಸರಕಾರದ ಖಜಾನೆಯನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ರಾಜ್ಯದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವರಿಷ್ಠರು, ಮುಖಂಡರು, ಹಿಂದಿನ ಬಿಜೆಪಿ ಸರಕಾರದ ವಿರುದ್ಧ ೪೦ ಪರ್ಸೆಂಟ್ ಕಮಿಶನ್ ಸರಕಾರ ಎಂದು ಸುಳ್ಳು ಆರೋಪ ಮಾಡಿ ಅಪಪ್ರಚಾರ ಮಾಡಿದ್ದರು. ಸಿಎಂ ಆಗಿದ್ದ ಬೊಮ್ಮಾಯಿ ಅವರ ವಿರುದ್ಧ ಪೇಸಿಎಂ ಪೋಸ್ಟರ್ ಅಂಟಿಸಿ ವ್ಯಾಪಕವಾಗಿ ಅಪಪ್ರಚಾರ ನಡೆಸಿದ್ದರು. ಸದ್ಯ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಕಾಂಗ್ರೆಸ್ ಸರಕಾರ ರಾಜ್ಯದ ಅಭಿವೃದ್ಧಿ ಕೆಲಸವನ್ನು ಮರೆತು ಸರಕಾರದ ಖಜಾನೆಯನ್ನು ಲೂಟಿ ಮಾಡುತ್ತಿದೆ. ತಮ್ಮ ಪಕ್ಷದ ಶಾಸಕರಿಗೆ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಿರುವ ರಾಜ್ಯ ಸರಕಾರ ಇರುವ ಅನುದಾನವನ್ನು ಲೂಟಿ ಮಾಡಿ ಪಂಚರಾಜ್ಯಗಳ ಚುನಾವಣೆ ಎದುರಿಸಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಐಟಿ ಇಲಾಖೆ ನಡೆಸಿದ ದಾಳಿಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತನಾಗಿರು ಅಂಬಿಕಾಪತಿ ಎಂಬ ಗುತ್ತಿಗೆದಾರನ ಬಳಿ ೪೨ ಕೋಟಿ ಹಣ ಪತ್ತೆಯಾಗಿದೆ. ಈ ಹಣ ಸರಕಾರದ ಖಜಾನೆಯಿಂದ ಲೂಟಿ ಮಾಡಿರುವ ಹಣ ಎಂಬುದೂ ಜಗಜ್ಜಾಹೀರಾಗಿದೆ ಎಂದ ಮುಖಂಡರು, ದೇಶದಲ್ಲಿ ಶೀಘ್ರ ಪಂಚರಾಜ್ಯಗಲ ಚುನಾವಣೆ ನಡೆಯಲಿದ್ದು, ಈ ರಾಜ್ಯಗಳಲ್ಲಿ ಮತದಾರರಿಗೆ ಹಣ ಹಂಚಲು ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರಕಾರವನ್ನು ಅವಲಂಭಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಅವರು ಸರಕಾರದ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿ ತಮ್ಮ ಹಿಂಬಾಲಕರು, ಆಪ್ತರ ಮೂಲಕ ಸಾವಿರಾರು ಕೋಟಿ ಜನರ ತೆರಿಗೆ ಹಣವನ್ನು ಲೂಟಿ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿರುವುದು ಕಾಂಗ್ರೆಸ್ ಸರಕಾರವಲ್ಲ, ಎಟಿಎಂ ಸರಕಾರವಾಗಿದೆ ಎಂದು ದೂರಿದರು.
ಸಿಎಂ, ಡಿಸಿಎಂ ಆಪ್ತನ ಮನೆಯಲ್ಲಿ ಪತ್ತೆಯಾಗಿರುವ ಹಣ ಎಲ್ಲಿಂದ ಬಂತು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಬಿಜೆಪಿ ಮುಖಂಡರಾದ ರವೀಂದ್ರ ಬೆಳವಾಡಿ, ಟಿ.ರಾಜಶೇಖರ್, ಈಶ್ವರಳ್ಳಿ ಮಹೇಶ್, ಹಿರೇಮಗಳೂರು ಪುಟ್ಟಸ್ವಾಮಿ, ನೆಟ್ಟೆಕೆರೆಹಳ್ಳಿ ಜಯಣ್ಣ, ಕವಿತಾ ಶೇಖರ್, ಜಸಿಂತಾ ಅನಿಲ್ಕುಮಾರ್, ಮಧುಕುಮಾರ್ ರಾಜ್ ಅರಸ್, ಕೋಟೆ ರಂಗನಾಥ್, ಕುರುವಂಗಿ ವೆಂಕಟೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
District BJP protest against state government