ಮೂಡಿಗೆರೆ: ಆಧುನಿಕ ಕಾಲಘಟ್ಟದಲ್ಲಿ ಮಲೆನಾಡಿನ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಉಳಿಸಿ, ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಮಲೆನಾಡಿನ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಹಬ್ಬ ಪ್ರೇರಣೆಯಾಗಿದೆ ಎಂದು ಶಾಸಕಿ ನಯನ ಮೋಟಮ್ಮ ಅಭಿಪ್ರಾಯಿಸಿದರು.
ಭಾನುವಾರ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಮಲೆನಾಡು ಸಮಾನ ಮನಸ್ಕ ಮಹಿಳೆಯರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಮಲೆನಾಡ ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು.
ಆಧುನಿಕ ಜಗತ್ತಿಗೆ ಮಾರು ಹೋಗಿರುವ ನಾವು ನಮ್ಮ ಸಂಸ್ಕೃತಿ, ಸಂಪ್ರದಾಯ ಮರೆಯುತ್ತಿದ್ದೇವೆ. ನಮ್ಮ ಹಿಂದಿನ ತಲೆಮಾರುಗಳಿಂದ ಬಂದಿರುವ ಸಂಪ್ರದಾಯ, ಸಂಸ್ಕೃತಿ ಉಳಿಸಬೇಕಿದೆ. ಮೂಡಿಗೆರೆ ಶೇ.೯೦ರಷ್ಟು ಅಪ್ಪಟ ಮಲೆನಾಡು, ಅತ್ಯಂತ ವಿಭಿನ್ನ ಸಂಸ್ಕೃತಿ, ಸಂಪ್ರ ದಾಯ ಹೊಂದಿದೆ. ಬೇರೆ ಬೇರೆ ಸಮುದಾಯದವರು ಇಲ್ಲಿ ನೆಲೆಯೂರಿದ್ದು ತಮ್ಮ ಸಂಸ್ಕೃತಿ, ಸಂಪ್ರದಾಯಗಳ ಜತೆ ಮಲೆನಾಡಿನ ಸಂಸ್ಕ್ರತಿಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದು ಹೇಳಿದರು.
ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳು, ಹಬ್ಬ ಹರಿದಿನಗಳು ಕೇವಲ ಮನೆ, ಗ್ರಾಮಗಳಿಗೆ ಮಾತ್ರ ಸೀಮಿತವಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸಬೇಕಿದೆ. ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತದೆ ಎಂದು ಅವರು, ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲೂ ಮಲೆನಾಡಿನ ತಿಂಡಿ ತಿನಿಸುಗಳು ವೈವಿಧ್ಯತೆಯಿಂದ ಕೂಡಿದ್ದು, ಎಲ್ಲರೂ ಇಷ್ಟಪಡು ತ್ತಾರೆ. ಹೊರ ಜಗತ್ತಿಗೆ ಪ್ರಚುರ ಪಡಿಸುವ ಅಗತ್ಯವಿದೆ ಎಂದರು.
ಡಾ|ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ ಮಲೆನಾಡು ಮಹಿಳೆಯರ ಸಾಂಸ್ಕೃತಿಕ ಸುಗ್ಗಿ ಹಬ್ಬವನ್ನು ಪ್ರಾಂಭಿಸಿದರು. ಆದರೆ, ಕಾರಣಾಂತರಗಳಿಂದ ನಿಲ್ಲಿಸಲಾಗಿತ್ತು. ಮಲೆನಾಡು ಸಂಸ್ಕ್ರತಿಯನ್ನು ಮೈಗೂ ಡಿಸಿಕೊಂಡಿರುವ ಅವರು, ಮತ್ತೊಮ್ಮೆ ಕಾರ್ಯಕ್ರಮ ರೂಪಿಸಲು ಚಿಂತಿಸಿ, ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮೂಡಿಗೆರೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೊಂದಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಮಿ ಸಮಸ್ಯೆ ಇದೆ. ಹೆಚ್ಚಿನ ಅರ್ಜಿಗಳು ಭೂಮಿಗೆ ಸಂಬಂಧಿಸಿದವುಗಳೇ ಆಗಿವೆ. ಅರಣ್ಯ ಸಂರಕ್ಷಣೆಯ ಜತೆಗೆ ಜನರ ಭೂಮಿ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ನಮ್ಮ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದೆ. ಅದನ್ನು ಉಳಿಸಬೇಕಿದೆ. ಜಾನಪದ ಎಂದರೇ ಜ್ಞಾನಪದ, ವಿಜ್ಞಾನಪದ, ಸುಜ್ಞಾನ ಪದ. ಇದು ಅರ್ಥವಾಗದವರಿಗೆ ಅಜ್ಞಾನದ ಪದ ಎಂದ ಅವರು, ನಮ್ಮ ಸಂಸ್ಕ್ರತಿ ಎಲ್ಲರ ಕಣ್ಣು ತೆರೆಸುವ ಸಂಸ್ಕೃತಿ ಎಂದರು.
ವೈವಾಹಿಕ ಜೀವನದಲ್ಲಿ ಗುಣ, ರೂಪ ಎಲ್ಲದಿಕ್ಕಿಂತಲೂ ಮಿಗಿಲಾಗಿ ಜೀವನ ಅರಿತು ಬಾಳುವುದು ಮುಖ್ಯ ಎಂಬುದನ್ನು ನಮ್ಮ ಹಿರಿಯರು ಬದುಕಿ ತೋರಿಸಿಕೊಟ್ಟಿದ್ದಾರೆ ಎಂದ ಅವರು, ಇಂದು ಕೃಷಿ ಅವಲಂಭಿತ ಪುರುಷರಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ವಿಚಾರ ವಿಷಾಧನೀಯ ಎಂದು ಹೇಳಿದರು.
ಮಾಜಿ ಶಾಸಕ ನೆ.ಲಾ.ನರೇಂದ್ರ ಬಾಬು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಕ್ಷಿತಾ ರಾಜು, ಅನುಪಮ ವಿಶ್ವಾಮಿತ್ರ, ಮುಗುಳಿ ಲಕ್ಷ್ಮೀದೇವಮ್ಮ, ದೇವನ ರವಿ, ವೀಣಾ ಡಿ.ಬಿ.ಚಂದ್ರೇಗೌಡ, ಡಾ|ಮಾನಸ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ, ನಿನಾಸಂ ಗಣೇಶ್, ಧಾರಾವಾಹಿ ನಟಿ ಶರ್ಮಿತ ಗೌಡ, ಒಕ್ಕೂಟದ ಡಾ|ಮೋಟಮ್ಮ, ಜಯಮ್ಮ, ಸೀತಮ್ಮ, ಜಮುನಾ ಇದ್ದರು. ಸವಿತಾ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ದಿಕ್ಷೀತ್ಗೌಡ ಮತ್ತು ಶೃತಿಗೌಡ ಅವರ ಅಣಕು ವಿವಾಹ ಮಹೋತ್ಸವ ಮಲೆನಾಡಿನ ಸಂಪ್ರ ದಾಯದಂತೆ ನಡೆದಿದ್ದು ವಿಶೇಷವಾಗಿತ್ತು ಹಾಗೂ ಸುಗ್ಗಿಕಾಲದ ಬಣವೆ ಪೂಜೆ ನೆರವೇರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಮಲೆನಾಡು ಸಂಪ್ರ ದಾಯದ ಜಾನಪದ ನೃತ್ಯ, ಜಾನಪದ ಗೀತೆ, ಕೋಲಾಟ ಸ್ಪರ್ಧೆ, ಕಂಸಾಳೆ, ನೃತ್ಯರೂಪಕ, ಜಾನಪದ ಶೈಲಿಯ ರ್ಯಾಪ್ ವಾಕ್ ನಡೆಯಿತು. ಮಲೆನಾಡು ತಿಂಡಿ ತಿನಿಸು ಗಳನ್ನು ಪ್ರದರ್ಶನ ಮಳಿಗೆ ಗಮನ ಸೆಳೆದವು. ವೇದಿಕೆಯನ್ನು ಮಲೆನಾಡು ಸಂಪ್ರದಾಯ, ಸಂಸ್ಕೃತಿಯಂತೆ ಅಲಂಕರಿಸಲಾಗಿತ್ತು.
Cultural harvest celebration of the women of Malenadu