ಚಿಕ್ಕಮಗಳೂರು: ಕಡೂರು ತಾಲ್ಲೂಕು ಯಗಟಿ ಗ್ರಾಮದಲ್ಲಿ ಇದೇ ಜ.೨೮ ರಂದು ಕುಮಾವ್ಯಾಸ ಜಯಂತಿ ಮತ್ತು ಅನ್ನಪೂರ್ಣ ಭೋಜನಶಾಲೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವೈಎಸ್ವಿ ದತ್ತ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ ೭ ರಿಂದ ಸಂಜೆ ವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯುಕ್ರಮಗಳು ನಡೆಯಲಿವೆ. ಬೆಳಗ್ಗೆ ೧೦ ಗಂಟೆಗೆ ವ್ಯಾಸ ಪೂಜೆ ನಡೆಯಲಿದ್ದು ಗೌರಿಗದ್ದೆಯ ದತ್ತಾವಧೂತರಾದ ವಿನಯ್ ಗರೂಜಿ ಭಾಗವಹಿಸಲಿದ್ದಾರೆ ಎಂದರು.
ಕುಮಾರ ವ್ಯಾಸನ ವಂಶಜರು ವ್ಯಾಸಪೂಜೆ ಸಮರ್ಪಿಸಲಿದ್ದು, ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಗೌರಿಶಂಕರ್ ಅವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಮಧ್ಯಾಹ್ನ ೧೨ಕ್ಕೆ ಕುಮಾರವ್ಯಾಸ ಭಾರತ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮವಿದ್ದು, ಮತ್ತೂರು ಹೊಸಳ್ಳಿಯ ಪ್ರಸಾದ್ ಭಾರಾದ್ವಾಜ್ ಅವರು ವಾಚಿಸಲಿದ್ದು, ತಮ್ಮದೇ ವ್ಯಾಖ್ಯಾನವಿರುತ್ತದೆ ಎಂದು ಹೇಳಿದರು.
ವ್ಯಾಸ ಜಯಂತಿ ಅಂಗವಾಗಿ ಜನವರಿ ೩೦ ರಂದು ಗ್ರಾಮ ದೇವತೆ ಶ್ರೀ ಅರೇಕಲ್ಲಮ್ಮನ ಬಾನ, ಫೆಬ್ರವರಿ ೧ ರಂದು ಸಿಡಿ ಉತ್ಸವ ಹಾಗೂ ಫೆಬ್ರವರಿ ೩ ರಂದು ಅಮ್ಮನವರ ತೇರು ಕಾರ್ಯಕ್ರಮವಿರುತ್ತದೆ ಎಂದರು.
ಕುಮಾರವ್ಯಾಸರು ಮೂಲತಃ ಗದುಗಿನ ವೀರನಾರಾಯಣ ಸ್ವಾಮಿಯ ಕ್ಷೇತ್ರದವರಾದರೂ ಅವರಿಗೂ ಯಗಟಿ ಗ್ರಾಮದಕ್ಕೂ ಸಂಬಂಧವಿದೆ. ಇದಕ್ಕೆ ಶಾಸನಗಳು ಹಾಗೂ ಐತಿಹ್ಯಗಳ ಆಧಾರವಿದೆ.
೧೪ ನೇ ಶತಮಾನದಲ್ಲಿ ಯಗಟಿಯು ತರೀಕೆರೆ ಪಾಳೆಯ ಪಟ್ಟಿಗೆ ಸೇರಲ್ಪಟ್ಟಿತ್ತು. ೧೫೬೫ ರಲ್ಲಿ ನಡೆದ ತಾಳೀಕೋಟೆ ಕದನದಲ್ಲಿ ತರೀಕೆರೆಯ ಪಾಳೆಯಗಾರ ಹನುಮಪ್ಪ ನಾಯಕನು ವೀರಾವೇಶದಿಂದ ವಿಜಯನಗರ ಸಾಮ್ರಾಜ್ಯದ ಪರವಾಗಿ ಹೋರಾಡಿದ್ದನು. ಇವನ ಸಾಹಸವನ್ನು ಮೆಚ್ಚಿ ಅರವೀಡು ವಂಶಜರಾದ ಅರಸು ಸದಾಶಿವರಾಯನು ಹನುಮಪ್ಪ ನಾಯಕನ ಕೋರಿಕೆ ಮೇರೆಗೆ ತರೀಕೆರೆ ಪಾಳೆಯಪಟ್ಟಿಯಲ್ಲಿ ಕಂದಾಯ ಮತ್ತಿತರೆ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು ಕೆಲವು ಬ್ರಾಹ್ಮಣ ಕರಣಿಕ(ಈಗಿನ ಶಾನಬೋಗರು)ರನ್ನು ಕಳಿಸಿಕೊಟ್ಟಿದ್ದ ಎಂದು ತಿಳಿಸಿದರು.
ಅವರೆಲ್ಲರೂ ಕುಮಾರವ್ಯಾಸರ ವಂಶಜರಾಗಿದ್ದರು. ಅವರೆಲ್ಲರೂ ಯಗಟಿಯನ್ನು ಕೇಂದ್ರ ಸ್ಥಾನ ಮಾಡಿಕೊಂಡು ಗದುಗಿನಿಂದಲೇ ವೀರನಾರಾಯಣ ಸ್ವಾಮಿಯ ಮೂರ್ತಿಯನ್ನು ಕೆತ್ತಿಸಿಕೊಂಡು ಬಂದು ಪ್ರತಿಷ್ಠಾಪಿಸಿ ದೇವಸ್ಥಾನವನ್ನೂ ನಿರ್ಮಿಸಿದ್ದರು ಎಂದು ದತ್ತ ಇತಿಹಾಸವನ್ನು ವಿವರಿಸಿದರು.
ನಂತರದ ದಿನಗಳಲ್ಲಿ ಅಲ್ಲಿ ನೆಲೆಸಿದ್ದ ವ್ಯಾಸರ ವಂಶಜರೆಲ್ಲರೂ ಹೊಯ್ಸಳ ಸಾಮ್ರಾಜ್ಯದ ಪ್ರದೇಶಗಳಾದ ಜಾವಗಲ್, ಕಳಸಾಪುರ, ಬೆಳವಾಡಿ, ಶಿವಮೊಗ್ಗ ಹೀಗೆ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ್ದಾರೆ. ಈ ಪೈಕಿ ಸುಮಾರು ೧೨ ವ್ಯಾಸ ವಂಶಜರ ಕುಟುಂಬಗಳು ಯಗಟಿಯಲ್ಲಿ ನೆಲೆಸಿದ್ದು, ಪೂಜೆ ಪುನಸ್ಕಾರ ಮಾಡಿಕೊಂಡು ಬಂದಿದ್ದು, ಪ್ರತಿ ವರ್ಷ ಚಾಚೂ ತಪ್ಪದೆ ವ್ಯಾಸ ಜಯಂತಿ, ವ್ಯಾಸ ಪೂಜೆ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಬಾರಿಯೂ ನಡೆಯುತ್ತಿದೆ ಎಂದು ವಿವವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚಂದ್ರಪ್ಪ ಮತ್ತು ಚಿದಾನಂದ ಇದ್ದರು.
Kumar Vyasa Jayanti in Yagati on January 28