ಚಿಕ್ಕಮಗಳೂರು: ಅಭಿವೃದ್ಧಿಯಲ್ಲಿ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ೨೫ ಕೋಟಿ ರೂ ವಿಶೇಷ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ಲಕ್ಯಾ ಹೋಬಳಿಯಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ತಾಲೂಕು ಆಡಳಿತ, ತಾ.ಪಂ ಇವರುಗಳ ಸಂಯುಕ್ತಾಶಯದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಗಳ ಕುರಿತು ಏರ್ಪಡಿಸಲಾಗಿದ್ದ ಹೋಬಳಿ ಮಟ್ಟದ ಗ್ಯಾರಂಟಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳು ಅನುದಾನ ನೀಡುವುದಾಗಿ ಆದೇಶಿಸಿದ್ದು, ಸಧ್ಯದಲ್ಲೇ ಕ್ರಿಯಾಯೋಜನೆ ತಯಾರಿಸಿ ಈ ಅನುದಾನವನ್ನು ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಾದ್ಯಂತ ಪ್ರತೀ ಹಳ್ಳಿಯಲ್ಲಿಯೂ ದೇವಾಲಯಗಳ ಜೀರ್ಣೋದ್ಧಾರ ಮಾಡಿ ನವೀಕರಿಸಲಾಗಿದೆ. ಈ ಅನುದಾನದಲ್ಲಿ ಪ್ರತೀ ದೇವಸ್ಥಾನಕ್ಕೆ ೪ ಲಕ್ಷ ರೂ ಅನುದಾನವನ್ನು ನೀಡಲು ಬದ್ದವಾಗಿರುವುದಾಗಿ ತಿಳಿಸಿದರು.
ರೈತರು ಕೃಷಿ ಮತ್ತು ಕೃಷಿಯೇತರ ಸಾಲವನ್ನು ಪಡೆದಿದ್ದು, ಶೀಘ್ರದಲ್ಲಿ ಅಸಲನ್ನು ಪಾವತಿಸಿದರೆ ಬಡ್ಡಿ ಮತ್ತು ಸುಸ್ಥಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದ್ದು, ಈಗಾಗಲೇ ಪಿಸಿಎಆರ್ಡಿ ಬ್ಯಾಂಕಿಗೆ ಆದೇಶ ಬಂದಿದೆ ಎಂದು ಹೇಳಿದರು.
ಲಕ್ಯಾ ಹೋಬಳಿಯಲ್ಲಿ ತೀವ್ರ ಬರಗಾಲ ಪೀಡಿತ ಪ್ರದೇಶವಾಗಿದ್ದರೂ ಕೇಂದ್ರ ಸರ್ಕಾರದ ಮಾನದಂಡದಡಿಯಲ್ಲಿ ಚಿಕಮಗಳೂರು ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ವ್ಯಾಪ್ತಿಯಿಂದ ಹೊರಗುಳಿದಿದೆ. ಈ ಸಂಬಂಧ ಮಾನದಂಡ ಬದಲಿಸಿಕೊಳ್ಳಲು ಬೆಳಗಾವಿ ಅಧಿವೇಶನದಲ್ಲಿ ಮನವಿ ನೀಡಿ ವಿಷಯ ಪ್ರಸ್ತಾಪ ಮಾಡಿದ್ದೇನೆ ಎಂದರು.
ಕೇಂದ್ರ ಸರ್ಕಾರದ ಮಾನದಂಡವನ್ನು ಬದಲಿಸಲು ನಮ್ಮ ಕೈಯಲ್ಲಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಬರಗಾಲದಿಂದಾಗಿ ಕುಡಿಯುವ ನೀರಿನ ವ್ಯವಸ್ಥೆಗೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಕ್ಷೇತ್ರದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ತಲೆದೋರಬಹುದಾದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಪಟ್ಟಿ ತರಿಸಿಕೊಂಡಿದ್ದು, ಹಾಲಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಲು ಆದೇಶಿಸಿದ್ದೇನೆಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ೫ ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮಿ, ಯುವನಿಧಿ ಈ ಯೋಜನೆಗಳ ಸಮಾವೇಶ ಮಾಡುತ್ತಿರುವ ಉದ್ದೇಶ ಫಲಾನುಭವಿಗಳಿಗೆ ನಿಗಧಿತ ಸಮಯದಲ್ಲಿ ಇದರ ಸೌಲಭ್ಯಗಳು ತಲುಪುತ್ತಿದೆ ಎಂಬ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದರು.
ತಾಲೂಕು ಪಂಚಾಯಿತಿ ಇಓ ತಾರಾನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಫಲಾನುಭವಿಳಿಗೆ ತಲುಪಿಸಲು ಇಲಾಖಾವಾರು ಶ್ರಮಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಲಕ್ಯಾ ಗ್ರಾ.ಪಂ ಅಧ್ಯಕ್ಷ ಹನೀಫ್, ಲಕ್ಕಮ್ಮನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷ ದಿನೇಶ್, ಸದಸ್ಯರುಗಳಾದ ಶೋಭಾ ಜಗದೀಶ್, ನಾಗರಾಜ್ ಎಲ್.ಎಂ, ಈರಮ್ಮ, ಶಶಿಧರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
Hobli level guarantee convention held at Lakya Hobli