ಚಿಕ್ಕಮಗಳೂರು: : ಕೇಂದ್ರ ಸರ್ಕಾರದ ಆಡಳಿತದ ನಿಲುವುಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಠಕವಾಗಿ ಭಾರತ ದೇಶದ ಅಭಿವೃದ್ದಿಗೆ ಮಾರಕವಾಗಿದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಷ್ಟ್ರದಲ್ಲಿ ಇ.ಡಿ ಹಾಗೂ ಐ.ಟಿ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂವಿಧಾನದ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಕಳೆದ ಲೋಕಸಭಾ ಅಧಿವೇಶನ ನಡೆಯುವ ಸಂದರ್ಭದಲ್ಲಿ ಹೊಗೆ ಬಾಂಬ್ ಸೃಷ್ಠಿಸಿದ ವ್ಯಕ್ತಿಗಳು ನ್ಯಾಯಾಲಯದಲ್ಲಿ ತಪ್ಪು ಒಪ್ಪಿಕೊಂಡಿದ್ದರು ವಿರೋಧ ಪಕ್ಷದವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆಂದು ಟೀಕಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡುತ್ತಾ ಕಾಂಗ್ರೆಸ್ ಪಕ್ಷಕ್ಕೆ ಮುಂದೆ ವಿಳಾಸ ಇಲ್ಲದಂತಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ವಿಳಾಸವನ್ನು ಹುಡುಕುವ ಕೆಲಸವನ್ನು ನಿಮಗೆ ಯಾರು ಕೊಟ್ಟವರು ಎಂದು ಪ್ರಶ್ನಿಸಿ ಹಿಂದೆ ಕೆಜೆಪಿ ಕಟ್ಟಿ ವಿಳಾಸ ಕಳೆದುಕೊಂಡವರಿಂದ ಪಾಠ ಕಲಿಯುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ತಲುಪಿಲ್ಲ ಎನ್ನುವ ವಿಜಯೇಂದ್ರರ ಹೇಳಿಕೆಯನ್ನು ಕಾಂಗ್ರೆಸ್ ಅಲ್ಲಗಳೆಯುತ್ತಾ ಹಸಿದವರು, ಬಡವರು, ನಿರ್ಗತಿಕರು, ರೈತರು, ಕಾರ್ಮಿಕ ಜನರಿಗೆ ಗೊತ್ತಿದೆ ಗ್ಯಾರೆಂಟಿ ನಮ್ಮ ಬದುಕನ್ನು ಎಷ್ಟು ಗಟ್ಟಿಗೊಳಿಸಿದೆ ಎಂದು. ಒಂದು ವಚನ ಹೀಗಿದೆ… ದೇವರಿಗೂ ವಚನಕಾರರು ಹೀಗೆ ಹೇಳುತ್ತಾರೆ.. ನೀನು ಒಮ್ಮೆ ಹಸಿದು ನೋಡಾ.. ಎಂದು ಹಾಗಾಗಿ ಬಡವರ ನೋವು ಬಡವರಿಗೆ ತಿಳಿದಿದೆ ಎಂದು ದಂಧೆಯ ಹಣವನ್ನು ಚೆಕ್ ಮೂಲಕ ಪಡೆದುಕೊಂಡವರಿಗೆ ಹಸಿವಿನ ಅರ್ಥವಾಗುವುದಿಲ್ಲ ಎಂದು ಆರೋಪಿಸಿದರು.
ಕಳೆದ ತಿಂಗಳು ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸಭೆಯಲ್ಲಿ ಲಿಂಗಾಯತ ಧರ್ಮ ಆಗಬೇಕೆಂದು ಒಕ್ಕೋರಲ ಧ್ವನಿ ಮಾಡಿದವರು ಯಾರು. ನೀವು ವೀರಶೈವ ಲಿಂಗಾಯತರೋ ಅಥವಾ ಹಿಂದೂಗಳೋ ಮೊದಲು ಸ್ಪಷ್ಠೀಕರಣ ಮಾಡಿಕೊಳ್ಳಿ. ಧ್ವಂದ್ವ ನಿಲುವಿನ ಮೂಲಕ ಕನ್ನಡ ನೆಲದ ಶಾಂತಿಯನ್ನು ಕದಡದಿರಿ ಎಂದು ಸಲಹೆ ಮಾಡಿದರು.
ಸಿ.ಟಿ ರವಿ ನಿನ್ನೆ ಮಾತನಾಡುತ್ತಾ ಚಿಕ್ಕಮಗಳೂರಿನಲ್ಲಿ ದಂಧೆ ಹೆಚ್ಚಾಗಿದೆ ಎಂದಿದ್ದಾರೆ. ದಂಧೆ ಎಂದರೆ ಏನು. ತಾವು ಈ ಧ್ವನಿಯನ್ನು ಹೇಳುತ್ತಿದ್ದೀರಿ ಎಂದರೆ ನಿಮಗೆ ಮಾರ್ಗ ತಿಳಿದಿರಬೇಕು. ಕಳೆದ ೨೦ ವರ್ಷಗಳಿಂದ ದಂಧೆಯನ್ನು ತಾವು ನಡೆಸಿರಬೇಕು. ಇಲ್ಲದಿದ್ದರೆ ದಂಧೆಯ ಮಾತುಗಳನ್ನು ಆಡುತ್ತಿರಲಿಲ್ಲ. ಕಾಂಗ್ರೆಸ್ಗೆ ದಂಧೆ ಮಾಡಿ ಬದುಕುವ ಅಗತ್ಯವಿಲ್ಲ. ಹಾಗಾಗಿ ಇಂತಹ ಮತುಗಳನ್ನಾಡದೇ ಜನರ ಬದುಕಿನ ಹಿತದೃಷ್ಠಿಯನ್ನು ಕುರಿತು ಮಾತನಾಡಿ ಎಂದು ಕುಟುಕಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬಿನ್ಮೊಸಸ್, ದಯಾನಂದ್, ಸಂತೋಷ್ ಲಕ್ಯಾ, ರಮೇಶ್, ಹೆಚ್.ಡಿ.ಮಂಜಪ್ಪ ಆಚಾರ್ ಇದ್ದರು.
The stance of central administration is fatal to democracy