ಚಿಕ್ಕಮಗಳೂರು: ಕಡೂರು ತಾಲ್ಲೂಕಿನಲ್ಲಿ ಅತೀವೃಷ್ಟಿಯಿಂದಾಗಿರುವ ನಷ್ಟ ಭರಿಸುವ ಪ್ರಕ್ರಯೆಯಲ್ಲಿ ನಡೆದಿರುವ ಬೆಳೆ ಪರಿಹಾರ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ ಪಾಲಾಕ್ಷಮೂರ್ತಿ ಎಂಬು ವರನ್ನು ಇಂದು ಜಿಲ್ಲಾಧಿಕಾರಿ ಮೀನಾನಾಗರಾಜ್ ಅಮಾನತ್ತುಗೊಳಿಸಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶ ಹೊರಡಿಸಿ ದ್ದಾರೆ.
ಕಡೂರು ತಾಲ್ಲೂಕು, ಚೌಳಹಿರಿಯೂರು ಹೋಬಳಿ, ಅಂತರಘಟ್ ಮತ್ತು ಕಲ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಅಧಿಕಾರಿ/ನೌಕರರು ಮಧ್ಯವರ್ತಿಗಳೊಂದಿಗೆ ಸೇರಿ ಮೂಲ ಖಾತೆದಾರರ ಪಹಣಿಯನ್ನು ಉಪಯೋಗಿಸಿ ಅದೇ ಹೆಸರು ಹೊಂದಿರುವ ಅನ್ಯ ವ್ಯಕ್ತಿಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಬಳಸಿ ಅಕ್ರಮವಾಗಿ ಬೆಳೆ ಪರಿಹಾರ ಹಣ ವರ್ಗಾವಣೆ ಮಾಡಿರುದ್ದರು.
ಅರೊಂದಿಗೆ ೨೦ ವರ್ಷಕ್ಕೂ ಮುನ್ನ ಮರಣ ಹೊಂದಿರುವ ಖಾತೆದಾರರ ಪಹಣಿಯನ್ನು ಉಪಯೋಗಿಸಿ ಅನ್ಯ ವ್ಯಕ್ತಿಗಳಿಗೆ ಅಕ್ರಮವಾಗಿ ಬೆಳೆ ಪರಿಹಾರದ ಹಣವನ್ನು ಜಮೆ ಮಾಡಿ ರೈತರಿಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿರುವುದಾಗಿ, ಇತ್ತೀಚೆಗೆ ಶಾಸಕ ಆನಂದ್ ಉಪಸ್ಥಿತಿಯಲ್ಲಿ ಕಡೂರಿನಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಈ ಅವ್ಯವಹಾರದ ಬಗ್ಗೆ ಆ ಭಾಗದ ರೈತರು ಗಮನಸೆಳೆದಿದ್ದರು.
ಈ ಬಗ್ಗೆ ಕ್ರಮಕೈಗೊಂಡ ಜಿಲ್ಲಾಧಿಕಾರಿ ಮೀನಾನಾಗರಾಜ್ರವರು ತರೀಕೆರೆ ಕಂದಾಯ ಉಪವಿಭಾಗಾಧಿಕಾರಿ ಡಾ.ಕಾಂತರಾಜ್, ಜಂಟಿ ಕೃಷಿ ನಿರ್ದೇಶಕಿ ಹೆಚ್.ಎನ್ ಸುಜಾತ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ ಪ್ರಕರಣವನ್ನು ತನಿಖೆವಹಿಸಲಾಗಿತ್ತು.
ತನಿಖಾಕಾರ್ಯ ಆರಂಭಿಸಿದ ಉಪವಿಭಾಗಾಧಿಕಾರಿ ಡಾ.ಕಾಂತರಾಜ್ ಮತ್ತು ಜಂಟಿ ಕೃಷಿ ನಿರ್ದೇಶಕಿ ಹೆಚ್.ಎನ್ ಸುಜಾತ ನೇತೃತ್ವದ ೨೦ಕ್ಕೂ ಹೆಚ್ಚು ಸದಸ್ಯರ ತಂಡ ಕಡೂರು ತಾಲ್ಲೂಕಿನ ಅಂತರಗಟ್ಟೆ ಮತ್ತು ಕಲ್ಕರೆ ವೃತ್ತದ ವ್ಯಾಪ್ತಿಯ ಅಂತರಗಟ್ಟೆ, ಹೊಸಹಳ್ಳಿ, ಕೆ.ಚೋಮನಹಳ್ಳಿ, ಗಂಗನಹಳ್ಳಿ, ಹುಲಿಹಳ್ಳಿ, ಕಲ್ಕರೆ, ಸಂಕಲಾಪುರ, ಹನುಮನಹಳ್ಳಿ, ಸಿ.ದಾಸರಹಳ್ಳಿ ಹುರಕನಹಳ್ಳಿ, ಗುಮ್ಮನಹಳ್ಳಿ, ಕಲ್ಲಹಳ್ಳಿ, ಸಿದ್ದಾಪುರ ಗ್ರಾಮದ ಫಲಾನುಭವಿಗಳ ಪಟ್ಟಿ ಪಡೆದು ತನಿಖೆ ಆರಂಭಿಸಿದರು.
ಪರಿಶೀಲನೆ ವೇಳೆ ಆ ವ್ಯಾಪ್ತಿಯ ೯೪೮ ಫಲಾನುಭವಿಗಳ (೧೭೧೫ ಸರ್ವೆ ನಂ)ಪೈಕಿ ೬೫೫ ಮಂದಿ ನಕಲಿ ಫಲಾನುಭವಿಗಳಿಗೆ ನಿಯಮ ಉಲ್ಲಘಿಸಿನ ೨ಕೋಟಿ ೧ಲಕ್ಷದ ೬೦ಸಾವಿರ ಪಾವತಿ ಮಾಡಿ ಸರ್ಕಾರದ ಖಜಾನೆಗೆ ನಷ್ಟ ಉಂಟುಮಾಡಿರುವ ಬಗ್ಗೆ ತನಿಖಾಧಿಕಾರಿ ಕಾಂತರಾಜ್ ವರದಿ ಸಲ್ಲಿಸಿದ್ದರು.
ಈ ಬಗ್ಗೆ ತಯಾರಿಸಿರುವ ಪ್ರಾಥಮಿಕ ವರದಿಯನ್ನು ಜಿಲ್ಲಾಡಳಿತಕ್ಕೆ ಇಂದು ಸಲ್ಲಿಸಿದ್ದು ಈ ವರದಿಯಲ್ಲಿ ಮೇಲ್ನೋಟಕ್ಕೆ ಗ್ರಾಮ ಆಡಳತಾಧಿಕಾರಿ ಪಾಲಾಕ್ಷಮೂರ್ತಿ ಕರ್ತವ್ಯಲೋಪ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಇಂದು ಆದೇಶ ಹೊರಡಿಸಿ ದ್ದಾರೆ.
ಈ ಪ್ರಕರಣದ ಕೂಲಂಕುಶ ತನಿಖೆ ನಡೆಯಬೇಕಿದ್ದು ಇದೇ ತಂಡ ಕೂಲಂಕುಶ ತನಿಖೆ ನಡೆಸಲು ಕಾಲಾವಕಾಶ ಕೋರಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದು ಈ ವರದಿಯಲ್ಲಿ ಇನ್ನೂ ಯಾರ್ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಲಿ ದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.೨೬ರಂದು ಜಿಲ್ಲೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಚ್ರವರು ಈ ಕುರಿತು ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು.
ಬರಕ್ಕೆ ತುತ್ತಾಗಿ ಬೆಳೆಹಾನಿಯಾದ ಫಲಾನುಭವಿಗಳ ಸಮಗ್ರ ವರದಿ ತಯಾರಿಸುವ ಗುರುತರ ಜವಾಬ್ದಾರಿ ಆ ವ್ಯಾಪ್ತಿಯ ಗ್ರಾಮ ಲೆಕ್ಕಿಗ ಪಾಲಾಕ್ಷಮೂರ್ತಿಯವರ ಮೇಲಿತ್ತು. ಕಾರ್ಯದ ಒತ್ತಡ ಹೆಚ್ಚಾದ ಕಾರಣ ಬೆಳೆನಷ್ಟವಾಗಿರುವ ಫಲಾನುಭವಿಗಳ ಪಟ್ಟಿ ತಯಾರಿಸುವ ಕೆಲಸವನ್ನು ಪಾಲಾಕ್ಷಮೂರ್ತಿ ಖಾಸಗಿಯವರಿಗೆ ನೀಡಿದ್ದರು ಎನ್ನಲಾಗಿದೆ.
ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕೆಲ ದಲ್ಲಾಳಿಗಳು ಅವ್ಯವಹಾರವೆಸಗಿ ನಕಲಿ ಫಲಾನುಭವಿಗಳ ಖಾತೆಗೆ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣವನ್ನು ವರ್ಗಾಯಿಸಿ ತಲಾ ಫಲಾನುಭವಿಗಳಿಂದ ತಮ್ಮ ಪಾಲಿನ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ರಮಕೋರರು ತಾವು ಪಡೆದ ಅವ್ಯವಹಾರದ ಹಣದಲ್ಲಿ ಗ್ರಾಮ ಲೆಕ್ಕಿಗ ಪಾಲಾಕ್ಷಮೂರ್ತಿ ನೇರ ಪಾಲುದಾರರೇ ಅಥವಾ ಅವರೊಂದಿಗೆ ಇನ್ನೂ ಯಾರ್ಯಾರೆಲ್ಲ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ತನಿಖೆ ಪೂರ್ಣಗೊಂಡ ನಂತರ ಸಮಗ್ರ ಮಾಹಿತಿ ಹೊರಬೀಳಲಿದೆ.
Crop Compensation Misappropriation Case – Suspension of Village Accountant