ಚಿಕ್ಕಮಗಳೂರು: ನೂತನವಾಗಿ ರಚನೆ ಮಾಡಿರುವ ಕಳಸ ತಾಲೂಕಿನಲ್ಲಿ ಕಾರ್ಯನಿರ್ವಹಿಸಬೇಕಾದ ತಾಲೂಕು ಮಟ್ಟದ ಇಲಾಖೆಗಳು ಕಾರ್ಯಾರಂಭ ಮಾಡದೆ ನಿಷ್ಕ್ರೀಯವಾಗಿವೆ. ಇದೊಂದು ಶಾಪಗ್ರಸ್ಥ ತಾಲೂಕಾಗಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆಯ ನಾಗೇಶ್ ಅಂಗೀರಸ ಆಪಾದಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳಸ ತಾಲೂಕು ಸದೃಢಗೊಳಿಸುವ ನಿಟ್ಟಿನಲ್ಲಿ ಸೃಜನಶೀಲ ಸಂಘಟನೆಗಳು, ವ್ಯಕ್ತಿಗಳನ್ನು ಒಳಗೊಂಡ ವೇದಿಕೆ ನಿರ್ಮಿಸಲು ನಮ್ಮ ಸಂಘಟನೆ ಮುಂದಾಗಿದೆ ಎಂದರು.
ಕಳಸ ತಾಲೂಕಿನ ೬ ಗ್ರಾ.ಪಂ.ಗಳ ಪೈಕಿ ೪ ರಲ್ಲಿ ಪಿಡಿಓಗಳೇ ಇಲ್ಲ. ಶಾಸಕರು, ಸಂಸದರು, ಡಿಸಿ, ಎಸ್ಪಿ ಇಲ್ಲಿಗೆ ಭೇಟಿ ನೀಡುವುದೇ ವಿರಳವಾಗಿದೆ. ಜಿಲ್ಲಾಧಿಕಾರಿ ಇತ್ತೀಚೆಗೆ ಒಂದು ಜನಸಂಪರ್ಕ ಸಭೆ ನಡೆಸಿ ಇನ್ನು ಮುಂದೆ ಎಲ್ಲ ಇಲಾಖೆಗಳ ಅಧಿಕಾರಿಗಳು ವಾರಕ್ಕೊಮ್ಮೆಯಾದರೂ ಕಳಸ ತಾಲೂಕು ಕೇಂದ್ರದಲ್ಲೇ ಕಾರ್ಯರ್ನಿಹಿಸಲಿದ್ದಾರೆ ಎಂದಿದ್ದರು. ಆದರೆ, ಆ ಭರವಸೆ ಹುಸಿಯಾಗಿದೆ ಎಂದು ದೂರಿದರು.
ಕಳಸ ತಾಲೂಕಿನ ೬೭೭೭ ಎಕರೆ ವ್ಯಾಪ್ತಿಯಲ್ಲಿನ ೬೩೮ ಕುಟುಂಬಗಳು ಅರಣ್ಯ ಭೂಮಿಯಲ್ಲಿವೆ ಎಂದು ಎತ್ತಂಗಡಿ ಭೀತಿಯಲ್ಲಿವೆ. ಸುಪ್ರೀಂ ಕೋರ್ಟ್ ಕತ್ತಿಯ ಅಲುಗಿನಿಂದ ಕಾಪಾಡುವ ಜವಾಬ್ದಾರಿ ರಾಜ್ಯ ಸರಕಾರಕ್ಕಿದೆ. ಹೀಗಾಗಿ ಅರಣ್ಯ ಇಲಾಖೆಗೆ ೬೭೭೭ ಎಕರೆ ಕಂದಾಯ ಭೂಮಿಯನ್ನು ಎಲ್ಲಾದರು ಹುಡುಕಿ ನೀಡಿದಲ್ಲಿ ೬೩೮ ಕುಟುಂಬಗಳು ನಿಟ್ಟುಸಿರು ಬಿಡುತ್ತವೆ ಎಂದರು.
ಈ ಹಿಂದೆ ಭ್ರಷ್ಟಾಚಾರದಲ್ಲಿ ಆರೋಪ ಹೊತ್ತ ನೌಕರರನ್ನೇ ಮುಂಬಡ್ತಿ ನೀಡಿ ಕಳಸ ತಾಲೂಕು ಕಚೇರಿಗೆ ನಿಯೋಜಿಸಲಾಗಿದೆ. ಇತರೆ ಠಾಣೆಯಲ್ಲಿ ಲೋಪ ಎಸಗಿದ ಸಿಬ್ಬಂದಿಯನ್ನು ಕುದುರೆ ಮುಖ ಪೊಲೀಸ್ ಠಾಣೆಯಲ್ಲಿ ನಿಯೋಜಿಸಿದ್ದು ಇವರಿಂದ ಉತ್ತಮ ಕರ್ತವ್ಯ ಪರತೆ ನಿರೀಕ್ಷಿಸುವುದು ಹೇಗೆ ಎಂದು ಪ್ರಶ್ನಿಸಿದರು.
ರೆಸಾರ್ಟ್ ಮಾಫಿಯಾ, ಮರ ಕಳ್ಳಸಾಗಣೆದಾರರು, ಕಳ್ಳಬೇಟೆ, ಸರಕಾರಿ ಭೂಮಿ ಒತ್ತುವರಿ, ನಕಲಿ ಭೂದಾಖಲೆ ಸೃಷ್ಟಿ ಮತ್ತತರೆ ಅನೇಕ ಅಕ್ರಮ ಚಟುವಟಿಕೆಗಳು ಕಳಸ ತಾಲೂಕಿನ ಸೃಜನಶೀಲ ಬೆಳವಣಿಗೆಗೆ ಕಂಟಕವಾಗಿವೆ. ಮುಂಬರುವ ಬೇಸಿಗೆ ಕಾಲದಲ್ಲಿ ರೆಸಾರ್ಟ್ ನವರು ಪ್ರವಾಸಿಗರನ್ನು ಆಕರ್ಷಿಸಲು ಫೈರ್ ಕ್ಯಾಂಪ್, ಚಾರಣ, ಮತ್ತಿತರೆ ಹೆಸರಲ್ಲಿ ಅನಕೃತ ಚಟುವಟಿಕೆ ನಡೆಸುತ್ತಾರೆ. ಬಲ್ಲಾಳರಾಯನ ದುರ್ಗದಿಂದ ಚಾರ್ಮಾಡಿ ಘಾಟ್ವರೆಗೆ ಇಂತಹ ಚಟುವಟಿಕೆಗಳಿಂದ ಕಾಡು ಪ್ರಾಣಿಗಳ ಸಹಜತೆಗೆ ಧಕ್ಕೆಯಾಗುತ್ತಿದೆ. ಕಾಡ್ಗಿಚ್ಚಿನಂತಹ ಅನಾಹುತಗಳಿಗೆ ಕಾರಣವಾಗಲಿದೆ. ಕುಡಿವ ನೀರಿನ ಹಾಹಾಕಾರ ಉಂಟಾಗಲಿದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
Building a platform to strengthen Kalasa Taluk