ಚಿಕ್ಕಮಗಳೂರು: ಸುಮಾರು ೩ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಪತಂಜಲಿ ಯೋಗ ಮಂದಿರದ ನೆಲಹಂತಸ್ಥಿನ ಪ್ರವೇಶೋತ್ಸವ, ಲೋಕಾರ್ಪಣೆ ಮತ್ತು ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಏಪ್ರಿಲ್ ೧೧ ರಂದು ಕಲ್ಯಾಣ ನಗರ ನೀಲಾಂಬಿಕ ಮಾರ್ಗ ೬ನೇ ಅಡ್ಡರಸ್ತೆಯಲ್ಲಿ ನಡೆಯಲಿದೆ ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿ?ಯ ತಿಳಿಸಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ. ಶ್ರೀ ಪತಂಜಲಿ ಯೋಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ಇವರುಗಳ ಸಹಯೋಗದಲ್ಲಿ ಹಾಗೂ ಧಾನಿಗಳ ನೆರವಿನಿಂದ ಈ ಯೋಗ ಮಂದಿರವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಪ್ರವೇಶೋತ್ಸವ ನಂತರ ಮಧ್ಯಾಹ್ನ ೧೨:೩೦ಕ್ಕೆ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಯೋಗ ಬಂಧುಗಳು ಹಾಗೂ ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಭಾರತ ದೇಶದ ಸನಾತನ ಧರ್ಮದ ಸಂಸ್ಕೃತಿಯನ್ನು ಸಮಾಜಕ್ಕೆ ತಿಳಿಸಿಕೊಡಲು ಸಂಸ್ಕಾರ, ಸಂಘಟನೆ, ಸೇವೆ ಎಂಬ ಧ್ಯೇಯೋದ್ದೇಶಗಳೊಂದಿಗೆ ಯೋಗ ಜೀವನದ ದರ್ಶನದ ಮೂಲಕ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರಮಿಸುತ್ತಿದೆ ಎಂದರು.
೧೯೮೦ ರಲ್ಲಿ ತುಮಕೂರು ನಗರದಲ್ಲಿ ಆರಂಭಗೊಂಡ ಯೋಗ ಶಿಕ್ಷಣ ಈ ಮೂಲಕ ಆರೋಗ್ಯ, ಮಕ್ಕಳಿಗೆ ದೈಹಿಕ ಶಿಕ್ಷಣ, ಯುವಕರಿಗೆ ಮಾರ್ಗದರ್ಶನ, ಗೃಹಸ್ಥಾಶ್ರಮ, ಧರ್ಮ ಒತ್ತಡ ರಹಿತ ವ್ಯವಸ್ಥಿತ ಜೀವನ ಮತ್ತು ಆಧ್ಯಾತ್ಮದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರು ನಗರದಲ್ಲಿ ಎಸ್.ಪಿ.ವೈ.ಎಸ್.ಎಸ್ ಶಾಖೆ ೨೦೦೬ರಲ್ಲಿ ಪ್ರಾರಂಭಿಸಲಾಯಿತು ಇಲ್ಲಿಯವರೆಗೆ ಸಾವಿರಾರು ಯೋಗ ಬಂಧುಗಳಿಗೆ ಶಿಕ್ಷಣ ನೀಡುತ್ತಿದ್ದು ನಗರ ಮತ್ತು ತಾಲೂಕಿನಲ್ಲಿ ಸುಮಾರು ೨೦ ತರಗತಿಗಳು ಪ್ರತಿನಿತ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರತಿನಿತ್ಯ ಯೋಗಭ್ಯಾಸ ಮಾಡುವುದರಿಂದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಇದೇ ದಿನ ಹಿರೇಮಗಳೂರು ಕಣ್ಣನ್ ನಾಗಶ್ರೀ ಅವರಿಂದ ಜುಗಲ್ಬಂಧಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಜಿಲ್ಲಾಧ್ಯಕ್ಷ ವರದರಾಜು, ಸಂಚಾಲಕಿ ಶಾರದರವಿ, ಪುಷ್ಪಾಪ್ರಕಾಶ್, ಖಜಾಂಚಿ ಸಿದ್ದೇಗೌಡ ಉಪಸ್ಥಿತರಿದ್ದರು.
Shree Patanjali Yoga Mandir Dedication