ಚಿಕ್ಕಮಗಳೂರು: ಚಿಕ್ಕಮಗಳೂರು ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ನ ಆಶ್ರಯದಲ್ಲಿ ಇದೇ ಮೇ.೧೮ ಮತ್ತು ೧೯ ರಂದು ಡರ್ಟ್ಟ್ರ್ಯಾಕ್ ಆಟೋಕ್ರಾಸ್ ಕಾರ್ ರ್ಯಾಲಿಯನ್ನು ಏರ್ಪಡಿಸಲಾಗಿದೆ ಎಂದು ರ್ಯಾಲಿಯ ಮುಖ್ಯಸ್ಥ ಭಾಸ್ಕರ್ ಗುಪ್ತ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ನಾಳೆ ಬೆಳಗ್ಗೆ ೭.೩೦ ರಿಂದ ಮೌಂಟೆನ್ ವ್ಯೂ ಶಾಲಾ ಮೈದಾನದಲ್ಲಿ ಈ ಆಟೋ ಕ್ರಾಸ್ ರ್ಯಾಲಿ ಚಾಲನೆಯಾಗಲಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ವಾಹನಗಳ ತಪಾಸಣೆ ನಡೆಯಲಿದೆ. ಮರುದಿನ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಪರ್ಧೆ ನಡೆಯಲಿದೆ ಎಂದರು.
ಈ ರ್ಯಾಲಿಯಲ್ಲಿ ವಿವಿಧ ಸಾಮರ್ಥ್ಯದ ವಾಹನಗಳ ೯ ವಿಭಾಗಗಳನ್ನು ಮಾಡಲಾಗಿದೆ. ಇದರಲ್ಲಿ ಮಹಿಳೆಯರು, ಸ್ಥಳೀಯರು ಮತ್ತು ಪ್ರಪ್ರಥಮವಾಗಿ ಭಾಗವಹಿಸುವ ಹೊಸ ಸ್ಪರ್ಧಿಗಳಿಗೆ ಪ್ರತ್ಯೇಕ ವಿಭಾಗಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಆಟೋ ಕ್ರಾಸ್ ರ್ಯಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ನಿಯಮಾವಳಿಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ಅತ್ಯಾಧುನಿಕ ೨ ಅಂಬುಲೆನ್ಸ್ಗಳನ್ನು ಹಾಗೂ ತುರ್ತು ಸಂದರ್ಭ ಒದಗಿದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ರ್ಯಾಲಿಯಲ್ಲಿ ಸುಮಾರು ೮೦ ರಿಂದ ೧೦೦ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದ್ದು, ವಾಹನಗಳ ಸಾಮರ್ಥ್ಯಕ್ಕೆ ತಕ್ಕಂತೆ ೩೦೦೦ ದಿಂದ ೩೫೦೦ ರವರೆಗೆ ಪ್ರವೇಶ ಶುಲ್ಕ ನಿಗದಿಪಡಿಸಿದ್ದು, ವಿಜೇತರಾದ ಪ್ರತಿ ವಿಭಾಗಕ್ಕೆ ಟ್ರೋಫಿಗಳ ಸಹಿತ ನಗದು ಬಹುಮಾನ ನೀಡಲಾಗುವುದೆಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರ್ಯಾಲಿಯ ಮ್ಯಾನ್ ಸೇಫ್ಟಿ ಅಧಿಕಾರಿ ಜನಾರ್ಧನ, ಸತ್ಯವ್ರತ, ಅಲ್ಮಾಸ್ ಅಹಮದ್ ಉಪಸ್ಥಿತರಿದ್ದರು.
Dirttrack Autocross Car Rally