ಚಿಕ್ಕಮಗಳೂರು: ರಾಷ್ಟ್ರ ಕಟ್ಟುವ ಕಾರ್ಯಗಳೊಂದಿಗೆ ಬದುಕಿರುವಾಗಲೇ ಜನ ಸಂಘ ಸ್ಥಾಪಕ, ರಾಜಕೀಯ ಮುತ್ಸದ್ಧಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಸಾರ್ಥಕ ಜೀವನ ನಡೆಸಿದ್ದಾರೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಆಯೋಜಿಸಿದ್ದ ಜನ ಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬದುಕು, ಹೋರಾಟ ಕುರಿತು ಉಪನ್ಯಾಸ ನೀಡಿ, ಶ್ಯಾಮ್ ಪ್ರಸಾದ್ ಮುಖರ್ಜಿ ಕೇವಲ ರಾಜಕಾರಣಿ ಆಗಿರಲಿಲ್ಲ. ಅವರು ರಾಜಕೀಯ ಮುತ್ಸದ್ಧಿಯಾಗಿದ್ದರು. ಅನುಭವಿ, ಚಿಂತಕ, ಕೌಶಲ್ಯ, ಬುದ್ಧಿವಂತರಾಗಿರುವವರನ್ನು ಮುತ್ಸದ್ಧಿ ಎಂದು ಕರೆಯುತ್ತೇವೆ. ಮುಖರ್ಜಿ ಅವರು ಎಲ್ಲವೂ ಆಗಿದ್ದರು ಎಂದು ಗುಣಗಾನ ಮಾಡಿದರು.
ಮುಖರ್ಜಿ ಅವರು ಬರೆದಿದ್ದು ಕಡಿಮೆ. ಆದರೆ, ಅವರು ರಾಷ್ಟ್ರಕ್ಕಾಗಿ, ದೇಶಕ್ಕಾಗಿ ಮಾಡಿರುವ ರಚನಾತ್ಮಕ, ಕ್ರಿಯಾಶೀಲ ಕಾರ್ಯಗಳು, ಅವರ ಚಿಂತನೆಗಳನ್ನು ಕುರಿತು ಗುರೂಜಿ ಸೇರಿದಂತೆ ಹಲವರು ಕೃತಿಗಳನ್ನು ಬರೆದಿದ್ದಾರೆ ಎಂದ ಅವರು, ದೇಶದ ಸಂಸ್ಕೃತಿ, ಐಕ್ಯತೆಗಾಗಿ ಮುಖರ್ಜಿ ಬದುಕು ಸವೆಸಿದ್ದಾರೆ. ರಾಜಕೀಯ ಮುತ್ಸದ್ಧಿ ಹೇಗಿರಬೇಕು ಎಂಬುದಕ್ಕೆ ಮುಖರ್ಜಿ ಒಂದು ಮಾದರಿಯಾಗಿದ್ದಾರೆ ; ಆದರ್ಶರಾಗಿದ್ದಾರೆ ಎಂದರು.
ಗುಲಾಮಿ ಪದ್ಧತಿಯಿಂದ ದೇಶವನ್ನು ಮುಕ್ತಗೊಳಿಸಲು ಮುಖರ್ಜಿ ಹೋರಾಡಿದ್ದಾರೆ. ಕಾಶ್ಮೀರದಲ್ಲಿ ೩೭೦ ವಿಧಿಯನ್ನು ಜಾರಿಗೊಳಿಸಿದ್ದನ್ನು ಬಲವಾಗಿ ವಿರೋಧಿಸಿದ್ದ ಮುಖರ್ಜಿ, ಒಂದು ದೇಶ, ಒಂದು ಧ್ವಜ, ಒಬ್ಬ ಪ್ರಧಾನಿ ಇರಬೇಕು ಎಂಬ ಸಿದ್ಧಾಂತಕ್ಕೆ ಕಟಿಬದ್ಧರಾಗಿ ಹೋರಾಡುವ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಅವರ ಜನ್ಮ ದಿನೋತ್ಸವ ಆಚರಿಸಿದರೆ ಸಾಲದು, ಅವರ ಸೈದ್ಧಾಂತಿಕ ಕಾರ್ಯಗಳನ್ನು ಪ್ರತಿ ದಿನ ಸ್ಮರಿಸುವ ಕಾರ್ಯ ನಡೆಯಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷ ಕಟ್ಟಿ ಬೆಳೆಸಿದ್ದ ಮುಖರ್ಜಿ ಅವರು ಎಂದೂ ಅಧಿಕಾರಕ್ಕಾಗಿ ಪ್ರಯತ್ನಿಸಲಿಲ್ಲ. ದೇಶದ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ನಿಸ್ವಾರ್ಥದಿಂದ ಮಾಡಿರುವ ಕಾರ್ಯಗಳು ನಮಗೆ ದಾರಿ ದೀಪವಾಗಿವೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಚಿತ್ರದುರ್ಗ ಪ್ರಭಾರಿ ಸಿ.ಆರ್.ಪ್ರೇಮಕುಮಾರ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತರಾಮ ಭರಣ್ಯ, ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರ ಬಿಜೆಪಿ ಮೋರ್ಚಾ ಅಧ್ಯಕ್ಷ ಪುಷ್ಪರಾಜ್, ಹಿರಿಯ ಮುಖಂಡ ಕೋಟೆ ರಂಗನಾಥ್ ಸೇರಿದಂತೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು. ಉಪನ್ಯಾಸ ನೀಡಿದ ಸ.ಗಿರಿಜಾಶಂಕರ್ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ನಗರ ಬಿಜೆಪಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಂಕರ್ ಸ್ವಾಗತಿಸಿ, ನಿರೂಪಿಸಿದರು.
ಈ ಕಾರ್ಯಕ್ರಮಕ್ಕೆ ಮೊದಲು ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ಗಿಡಗಳನ್ನು ನೆಡಲಾಯಿತು.
Shyam Prasad Mukherjee lived a meaningful life while living with nation-building tasks