ಚಿಕ್ಕಮಗಳೂರು: ಮುಂಬರುವ ಜನವರಿ ಅಂತ್ಯದೊಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪೂರ್ಣಗೊಳಿಸುವುದರೊಂದಿಗೆ ಪರಿಪೂರ್ಣವಾಗಿ ವೈದ್ಯಕೀಯ ಕಾಲೇಜನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಕೌಸಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್.ಪಾಟೀಲ್ ತಿಳಿಸಿದರು.
ಅವರು ಇಂದು ಜಿಲ್ಲೆಯ ಮೆಡಿಕಲ್ ಕಾಲೇಜು ಆವರಣಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ನಂತರ ಕಾಲೇಜು ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಆರಂಭವಾಗಿರುವ ವೈದ್ಯಕೀಯ ಕಾಲೇಜು ಬಹುತೇಕ ಪೂರ್ಣಗೊಂಡಿದ್ದು, ಈ ಕಾಲೇಜಿನ ಸಮಸ್ಯೆಗಳ ಬಗ್ಗೆ ಖುದ್ದಾಗಿ ತಿಳಿದುಕೊಂಡು ಪರಿಹಾರ ಕ್ರಮ ಕೈಗೊಳ್ಳುವ ಸಲುವಾಗಿ ಇಂದು ಭೇಟಿನೀಡಿ ಪರಿಶೀಲಿಸಿರುವುದಾಗಿ ಹೇಳಿದರು.
ಹೊಸ ಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದ ತರಗತಿಗಳು ಆರಂಭವಾಗಿದ್ದು, ಮೊದಲ ವರ್ಷದ ತರಗತಿಗಳಿಗೆ ಅಗತ್ಯ ಇರುವಷ್ಟು ಪ್ರಯೋಗಾಲಯವಿದ್ದು, ಎರಡನೇ ವರ್ಷದ ತರಗತಿಗಳಿಗೆ ಬೇಕಾಗಿರುವ ಪೆಥೋಲಜಿ, ಮೈಕ್ರೋ ಬಯಾಲಜಿ ಮುಂತಾದ ಪ್ರಯೋಗಾಲಯಗಳು ಆರಂಭವಾಗಬೇಕಿದ್ದು, ಕಟ್ಟಡ ಹಾಗೂ ಪ್ರಯೋಗಾಲಯದ ಸಲಕರಣೆಗಳು ಈಗಾಗಲೇ ಬಂದಿದೆ. ಈ ತಿಂಗಳ ಮಾಸಾಂತ್ಯದಲ್ಲಿ ಸಂಪೂರ್ಣವಾಗಿ ಪ್ರಯೋಗಾಲಯವನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಕಾಲೇಜು ಸುತ್ತ-ಮುತ್ತ ರಕ್ಷಣೆಗಾಗಿ ಭದ್ರತಾ ಸಿಬ್ಬಂದಿ ನೇಮಕ ಹಾಗೂ ಸ್ವಚ್ಚತಾ ಸಿಬ್ಬಂದಿ ನೇಮಕಕ್ಕೆ ಅನುದಾನ ವಿನಿಯೋಗಿಸುವ ಬಗ್ಗೆ ಆಡಳಿತಾತ್ಮಕ ಗೊಂದಲಗಳಿದ್ದು ಇದನ್ನು ಸರಿಪಡಿಸಿ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೊಹಿಸಿನ್ ಅವರಿಗೆ ಸೂಚನೆ ನೀಡಿದರು.
ವೈದ್ಯಕೀಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿರುವುದರಿಂದ ಹಾಗೂ ವಸತಿ ನಿಲಯದ ಕಟ್ಟಡ ಪೂರ್ಣವಾಗುವವರೆಗೆ ಬೇರೆ ಬೇರೆ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅವಕಾಶಮಾಡಿಕೊಟ್ಟಿದ್ದು, ಇನ್ನು ಎರಡು ತಿಂಗಳೊಳಗಾಗಿ ಹಾಸ್ಟೆಲ್ ಕಟ್ಟಡವನ್ನು ಪೂರ್ಣಗೊಳಿಸಿ ಬೇರೆಡೆ ಇರುವ ವಿದ್ಯಾರ್ಥಿಗಳನ್ನು ಈ ಹಾಸ್ಟೆಲ್ಗೆ ಸ್ಥಳಾಂತರಿಸುವುದಾಗಿ ತಿಳಿಸಿದರು.
ಕುಡಿಯುವ ನೀರು ಹಾಗೂ ಬಿಸಿ ನೀರಿನ ಕೊರತೆ ಬಗ್ಗೆ ಗಮನಕ್ಕೆ ಬಂದಿದ್ದು, ಸೋಲಾರ್ ಅಳವಡಿಸುವ ಮೂಲಕ ಶೀಘ್ರದಲ್ಲಿಯೇ ವಿದ್ಯಾರ್ಥಿನಿಲಯಗಳಿಗೆ ಬಿಸಿನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರ ನೇಮಕಾತಿಗೆ ಸರ್ಕಾರ ಮುಂದಾಗಿದ್ದು, ಪ್ರಾಧ್ಯಾಪಕ ನೇಮಕಾತಿ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ತೀರ್ಪು ಬಂದ ನಂತರ ಪ್ರಾಧ್ಯಾಪಕರ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು, ಅದಕ್ಕಿಂತ ಮುಂಚೆ ಸಹ ಪ್ರಾಧ್ಯಾಪಕರು ಹಾಗೂ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ವಹಿಸಲಾಗುವುದೆಂದರು.
ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿಗೆ ಅನುದಾನದ ಕೊರತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಇದೀಗ ನಡೆದಿರುವ ಕಾಮಗಾರಿಗೆ ಯಾವುದೇ ಹಣ ಬಾಕಿ ಇಲ್ಲ ಎಂದು ಸ್ವಷ್ಟಪಡಿಸಿದರು.
ಪ್ರತ್ಯೇಕ ಸರ್ಕಾರಿ ನರ್ಸಿಂಗ್ ಕಾಲೇಜು ಆರಂಭಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆ ಬಗ್ಗೆ ಪ್ರಸ್ತಾಪಿಸಿದಾಗ ಉತ್ತರಿಸಿದ ಸಚಿವರು ಈ ಬೇಡಿಕೆ ಬಗ್ಗೆ ಸರ್ಕಾರ ಪರಿಗಣಿಸಬಹುದಾದರೂ ಸಧ್ಯಕ್ಕೆ ಮೆಡಿಕಲ್ ಕಾಲೇಜಿನಲ್ಲಿಯೇ ಬೋಧಕ ಸಿಬ್ಬಂದಿ ಇರುವುದರಿಂದ ಇದೇ ಕಾಲೇಜಿನಲ್ಲಿ ನರ್ಸಿಂಗ್ ತರಗತಿಗಳನ್ನು ನಡೆಸಲಾಗುವುದೆಂದು ಹೇಳಿದರು.
ಪತ್ರಿಕಾಗೋಷ್ಠಿಗೂ ಮುನ್ನ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದು, ಕುಡಿಯುವ ನೀರು, ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಹಾಸ್ಟೆಲ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಸಚಿವರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಶಾಸಕರುಗಳಾದ ಹೆಚ್.ಡಿ ತಮ್ಮಯ್ಯ, ಜಿ.ಹೆಚ್ ಶ್ರೀನಿವಾಸ್, ನಯನ ಮೋಟಮ್ಮ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಕೃಷಿ ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಹೆಚ್ ಹರೀಶ್, ಭದ್ರ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ಮೆಡಿಕಲ್ ಕಾಲೇಜು ನಿರ್ದೇಶಕಿ ಸುಜಾತ, ಮುಖ್ಯ ಆಡಳಿತಾಧಿಕಾರಿ ಹರೀಶ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
The super specialty hospital will be full by the end of January