ಚಿಕ್ಕಮಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ೭ನೇ ವೇತನ ಆಯೋಗದ ವರದಿಯ ಶಿಫಾರಸ್ಸನ್ನು ಜಾರಿಗೊಳಿಸುವುದು, ನೂತನ ಪಿಂಚಣಿ ಯೋಜನೆಯನ್ನು ಕೈ ಬಿಟ್ಟು ಹಳೇ ಯೋಜನೆಯನ್ನೇ ಮುಂದುವರೆಸುವುದು ಹಾಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವ ನಿರ್ಣಯವನ್ನು ನಗರದ ಸೀತಾ ದಯಾನಂದ ಪೈ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ ಕೈಗೊಂಡಿದೆ.
ಮೂರು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕುರಿತು ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ಪ್ರಸ್ತಾಪವನ್ನು ಇಡೀ ಕಾರ್ಯಕಾರಿಣಿ ಸಭೆ ಒಕ್ಕೊರಲಿನಿಂದ ಅನುಮೋದಿಸಿತು.
ಹೋರಾಟದ ಮೊದಲ ಹಂತವಾಗಿ ಜು ೮ ರಿಂದ ೧೪ ರವರೆಗೆ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಸುವುದು, ನಂತರ ಬೆಂಗಳೂರಿನಲ್ಲಿ ಮತ್ತೊಮ್ಮೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವುದು, ಸ್ಪಂದಿಸದಿದ್ದಲ್ಲಿ ಈ ತಿಂಗಳ ಕೊನೆಯಲ್ಲಿ ಅಥವಾ ಆಗಸ್ಟ್ ತಿಂಗಳ ಆರಂಭದಿಂದಲೇ ಕರ್ತವ್ಯಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಕುರಿತು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಮಾತನಾಡಿದ ವಿವಿಧ ಇಲಾಖೆ ನೌಕರರ ಸಂಘಗಳ ಪ್ರಮುಖರು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಇಂದು ಅನಿವಾರ್ಯವಾಗಿದ್ದು ರಾಜ್ಯದ ಎಲ್ಲಾ ಆರು ಲಕ್ಷ ಸರ್ಕಾರಿ ನೌಕರರೂ ಒಗ್ಗೂಡಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ೭ನೇ ವೇತನ ಆಯೋಗ ವರದಿ ನೀಡಿ ೧೯ ತಿಂಗಳುಗಳಾದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಿಲ್ಲ, ನೌಕರರಿಗೆ ಹಳೇ ಪಿಂಚಣಿ ಯೋಜನೆಯನ್ನೇ ಮುಂದುವರಿಸುವುದು, ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ಸೇರಿದಂತೆ ಯಾವುದೇ ಬೇಡಿಕೆಗಳಿಗೂ ರಾಜ್ಯ ಸರ್ಕಾರ ಎರಡು ವರ್ಷಗಳಿಂದ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಗಳು ಏಳನೇ ವೇತನ ಆಯೋಗದ ವರದಿಯ ಶಿಫಾರಸ್ಸನ್ನು ಆದಷ್ಟು ಶೀಘ್ರ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು, ನಂತರ ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಜಾರಿ ಮಾಡುವುದಾಗಿ ಹೇಳಿದ್ದರು ಆದರೆ ಆ ಭರವಸೆಯೆಲ್ಲವೂ ಎರಡು ವರ್ಷವಾದರೂ ಈಡೇರದೆ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸಂಘದ ಪದಾಧಿಕಾರಿಗಳು ಹಲವು ಬಾರಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ, ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನಸ್ಸಿಲ್ಲ ಎಂದು ದೂರಿದರು.
ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಇಂದು ನಮಗೆ ಹೋರಾಟ ಅನಿವಾರ್ಯವಾಗಿದ್ದು ರಾಜ್ಯದ ಎಲ್ಲಾ ಆರು ಲಕ್ಷ ಸರ್ಕಾರಿ ನೌಕರರೂ ಮುಷ್ಕರಕ್ಕೆ ಇಳಿಯಬೇಕು, ಸಸ್ಪೆಂಡ್, ಡಿಸ್ಮಿಸ್, ಎಸ್ಮಾ ಜಾರಿ ಸೇರಿದಂತೆ ಯಾವುದೇ ಒತ್ತಡ ಯಾವುದೇ ಬೆದರಿಕೆಗೂ ಬೆದರದೇ ಬಗ್ಗದೇ ಕರ್ತವ್ಯವನ್ನು ಬಹಿಷ್ಕರಿಸಿ ಚಳುವಳಿ ನಡೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಸರ್ಕಾರಿ ನೌಕರರಿಗೂ ಹೆಂಡತಿ, ಮಕ್ಕಳು, ಸಂಸಾರ ವಿರುವುದನ್ನು ರಾಜ್ಯ ಸರ್ಕಾರ ಮನಗಾಣಬೇಕು, ನಾಡಿನ ಮತ್ತು ಜನರ ಏಳಿಗೆಗಾಗಿ ಆಹರ್ನಿಷಿ ದುಡಿಯುತ್ತಿರುವ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಿವಿ ಮಾತು ಹೇಳಿದರು.
ಸರ್ಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷ ವೆಂಕಟೇಶಯ್ಯ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ್, ಹಿರಿಯ ಉಪಾಧ್ಯಕ್ಷರಾದ ಎಂ, ವಿ, ರುದ್ರಪ್ಪ, ಎಸ್, ಬಸವರಾಜ್, ಖಜಾಂಚಿ, ಡಾ, ಸಿದ್ದರಾಮಣ್ಣ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದೇವೇಂದ್ರ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
State government employees to go on indefinite strike