ಚಿಕ್ಕಮಗಳೂರು: ವಿವಿಧ ವಸತಿ ಯೋಜನೆಗಳಡಿ ಶೀಘ್ರವೇ ವಸತಿ-ನಿವೇಶನ ರಹಿತರಿಗೆ ಮನೆ ನೀಡಲು ಕ್ರಮ ವಹಿಸಲಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.
ಅವರು ಇಂದು ನಗರಸಭೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪ್ಪಳ್ಳಿ ವಾಜಪೇಯಿ ಬಡಾವಣೆಯಲ್ಲಿ ೧೫೧೧ ಜಿ+೨ ಮಾದರಿಯ ಮನೆಗಳ ಕಾಮಗಾರಿ ಬಹಾಳ ಬೇಗ ಮುಕ್ತಾಯಗೊಳಿಸಿ ಪ್ರತೀ ಫಲಾನುಭವಿಗೆ ನಿಗದಿಗೊಳಿಸಿದ್ದ ೩ ಲಕ್ಷ ರೂಗಳ ಬದಲಿಗೆ ಸರ್ಕಾರ ೧ ಲಕ್ಷ ರೂ ಪಾವತಿಸುವಂತೆ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಇನ್ನು ೩ ತಿಂಗಳಲ್ಲಿ ೩೦೦ ಮನೆಗಳ ಕಾಮಗಾರಿಯನ್ನು ಶೀಘ್ರ ಮುಗಿಸಿ ಫಲಾನುಭವಿಗಳಿಗೆ ಮನೆಗಳನ್ನು ವಿತರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ನಗರದಲ್ಲಿ ಇರುವ ನಿವೇಶನ ವಸತಿ ರಹಿತರ ಗುರ್ತಿಸಲಾಗಿದ್ದು, ಇಂದಿರಾಗಾಂಧಿ ಬಡಾವಣೆಯಲ್ಲಿ ಈಗಾಗಲೇ ಮನೆ ನಿರ್ಮಾಣ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ಇಲ್ಲದೆ ತೊಂದರೆಯಾಗಿದ್ದು ಈ ಬಗ್ಗೆ ಇಂದು ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಇದನ್ನು ಸರಿದೂಗಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಸುಮಾರು ೮೬೧ ಮನೆಗಳಲ್ಲಿ ೪೬೩ ಮನೆಗಳು ನಿರ್ಮಾಣವಾಗಿವೆ. ಇದರಲ್ಲಿ ೧೭೩ ಜನರಿಗೆ ತಹಶೀಲ್ದಾರ್ ಸಹಿ ಇರುವ ಹಕ್ಕುಪತ್ರ ಸಿಕ್ಕಿದ್ದು, ಉಳಿದವರಿಗೆ ಕೆಲವು ಕಾರಣಗಳಿಂದಾಗಿ ಸಿಕ್ಕಿಲ್ಲ. ಬಡವರಾಗಿರುವ ಇವರು ಅಲ್ಲಿ ಮನೆಯನ್ನು ಕಟ್ಟಿಕೊಂಡು ವಾಸವಾಗಿದ್ದಾರೆ, ಈ ಬಗ್ಗೆ ಪರಿಶೀಲಿಸುವಂತೆ ಚರ್ಚಿಸಲಾಗಿದ್ದು ನಿಜವಾದ ಅರ್ಹ ಫಲಾನುಭವಿಗಳನ್ನು ಗುರ್ತಿಸಿ ಹಕ್ಕುಪತ್ರ ವಿತರಣೆ ಮಾಡುವುದಾಗಿ ಭರವಸೆ ನೀಡಿದರು.
ಉಳಿದ ೨೩೮ ಜನ ಯಾವುದೇ ದಾಖಲೆ ಪತ್ರ ಸಲ್ಲಿಸಿಲ್ಲ. ಇನ್ನೊಮ್ಮೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ವಿವಿದೆಡೆ ನಿವೇಶನ ಹೊಂದಿರುವವರು ಅಲ್ಲಿ ನಿವೇಶನ ಮನೆ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಪ್ರಶ್ನಿಸಿದಾಗ ಈ ಕುರಿತು ಮುಂದಿನ ಆಶ್ರಯ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ಸ್ಲಂಬೋರ್ಡ್ನಿಂದ ಮನೆ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ನಗರದಿಂದ ೫ ಕಿ.ಮೀ ವ್ಯಾಪ್ತಿಯಲ್ಲಿ ೫-೧೦ ಎಕರೆ ಜಾಗವನ್ನು ಗುರ್ತಿಸುವಂತೆ ತಹಶೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಜಾಗ ಲಭ್ಯವಾದರೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರಾತಿ ಪಡೆದು ಮನೆ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ವಸತಿ ರಹಿತ ೪೦೦ ಜನರು ಅರ್ಜಿ ಸಲ್ಲಿಸಿದ್ದು, ಇವರಿಗೆ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಬೀಕನಹಳ್ಳಿ ಸರ್ವೆ ನಂಬರ್ನ ಎಐಟಿ ಕಾಲೇಜು ಹಿಂಭಾಗ ೩ ಎಕರೆ ಸರ್ಕಾರಿ ಜಾಗವನ್ನು ಗುರ್ತಿಸಲಾಗಿದ್ದು, ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಲ್ಲೂ ನಿವೇಶನಗಳನ್ನು ನೀಡಲು ಬದ್ಧವಾಗಿರುವುದಾಗಿ ತಿಳಿಸಿದರು.
ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ನಗರದ ಉಪ್ಪಳ್ಳಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಜಿ+೨ ಮಾದರಿಯ ಮನೆಗಳ ಶೀಘ್ರ ಕಾಮಗಾರಿ ಮುಗಿಸಿ ಫಲಾನುಭವಿಗಳಿಗೆ ವಿತರಿಸಲು ಕ್ರಮವಹಿಸಲಾಗಿದೆ ಎಂದರು.
ಉಪ್ಪಳ್ಳಿ ಸರ್ವೆ ನಂಬರ್ ೨೭ ರಲ್ಲಿ ೮ ಎಕರೆ ಗೋಮಾಳ ಜಾಗವನ್ನು ಒತ್ತುವರಿ ಮಾಡಿ, ತೋಟ, ಮನೆ ಕಟ್ಟಿ ವಾಸ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ರವರು ಗಮನ ಹರಿಸಿರಲಿಲ್ಲ ಕಳೆದ ಒಂದು ತಿಂಗಳ ಹಿಂದೆ ಈ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಸರ್ವೆ ಮಾಡಿ ಸರ್ಕಾರಿ ಜಾಗವನ್ನು ಖುಲ್ಲಾಗೊಳಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದರು.
ತಮ್ಮ ೩೦ ತಿಂಗಳ ಅಧಿಕಾರವಧಿಯಲ್ಲಿ ಸಾರ್ವಜನಿಕರು ಮತ್ತು ಸದಸ್ಯರ ಮನವಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದವರಿಗೆ ಉತ್ತಮ ನೀಡಿ ಸ್ಪಷ್ಟಪಡಿಸಿದರು.
ಈ ಸಭೆಯಲ್ಲಿ ಪೌರಾಯುಕ್ತ ಬಿ.ಸಿ ಬಸವರಾಜು ನಗರ ಆಶ್ರಯ ಸಮಿತಿ ಸದಸ್ಯರಾದ ಫಯಾಜ್ ಅಹಮ್ಮದ್, ಪ್ರಸಾದ್ಅಮೀನ್, ಎನ್.ಕೆ.ಮಧು, ಬಿ.ಯಶೋಧ ಹಾಗೂ ನಗರಸಭೆ ಅಧಿಕಾರಿಗಳು ಮತ್ತು ಆಶ್ರಯ ಸಮಿತಿ ಸದಸ್ಯರುಗಳು ಭಾಗವಹಿಸಿದ್ದರು.
City Shelter Committee meeting convened at Municipal Hall