ಚಿಕ್ಕಮಗಳೂರು: ಡೆಂಗ್ಯೂ ಪ್ರಕರಣಗಳು, ಜ್ವರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಅವುಗಳ ನಿಯಂತ್ರಣ ಮತ್ತು ನಿರ್ಮೂಲನೆಗಾಗಿ ಕ್ರಮ ವಹಿಸಬೇಕೆಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಸೂಚಿಸಿದರು.
ಕೈಮರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಂದು ಭೇಟಿ ನೀಡಿ ಡೆಂಗ್ಯೂ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಹೈರಿಸ್ಕ್ ಪ್ರದೇಶಗಳನ್ನು ಗುರುತಿಸಿ, ಡೆಂಗ್ಯೂ ಮತ್ತು ಚಿಕನ್ಗುನ್ಯಾ ರೋಗ ಹರಡದಂತೆ ಲಾರ್ವಾ ಸಮೀಕ್ಷೆಯನ್ನು ನಡೆಸುವಂತೆ ತಿಳಿಸಿದ ಅವರು ಪ್ರತಿ ಮನೆ ಮನೆಗಳಿಗೂ ತೆರಳಿ ಡೆಂಗ್ಯೂ ನಿಯಂತ್ರಣದ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದ ಅವರು ನಿಯಮಿತವಾಗಿ ಪ್ರತಿ ಗ್ರಾಮಗಳಲ್ಲಿ ಫಾಗಿಂಗ್ ಮಾಡುವಂತೆ, ಹಾಗೂ ಚರಂಡಿಯನ್ನು ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಸೂಚಿಸಿದರು.
ಸಂಶಯಾಸ್ಪದ ಜ್ವರ ಪ್ರಕರಣಗಳನ್ನು ಗುರುತಿಸಿ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವುದು. ಗ್ರಾಮದಲ್ಲಿನ ಸಾರ್ವಜನಿಕರಿಗೆ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಐ.ಇ.ಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಕರಪತ್ರ, ಭಿತ್ತಿಪತ್ರಗಳ ಮೂಲಕವು ಕೂಡ ಜಾಗೃತಿ ಮೂಡಿಸಬೇಕಲ್ಲದೆ. ಸೊಳ್ಳೆಗಳ ನಿಯಂತ್ರಣಕ್ಕೆ ಮನೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಹಿತಿ ನೀಡಿ ಎಂದರು.
ಜಿಲ್ಲೆಯು ಪ್ರವಾಸಿ ತಾಣಗಳಿಗೆ ಪ್ರಸಿದ್ಧಿಯಾಗಿದ್ದು, ಇಲ್ಲಿನ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ ಹಾಗೂ ಇನ್ನಿತರ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಾಹನ ದಟ್ಟನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಾಹನಗಳ ಪಾರ್ಕಿಂಗಿಗೆ ಸ್ಥಳ ಪರಿಶೀಲನೆ ನಡೆಸಿದರು.
ಗಿರಿ ಪ್ರದೇಶದ ಸ್ವಚ್ಛತೆ ಕಾಪಾಡಲು ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಪ್ರವಾಸಿಗರು ಸ್ವಚ್ಛತೆಗೆ ಗಮನಹರಿಸಬೇಕು ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಕಬಾರದು, ಪಾರ್ಕಿಂಗ್ ಹಾಗೂ ಇತರೆ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತಹಸೀಲ್ದಾರ್ ಡಾ. ಸುಮಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ, ಡಾ. ಬಾಲಕೃಷ್ಣ ಮುಂತಾದವರಿದ್ದರು.
Create awareness from house to house to prevent the spread of dengue