ಚಿಕ್ಕಮಗಳೂರು: ತಾಲೂಕಿನ ತೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.೯೩ ರಲ್ಲಿ ೧೩ ಎಕರೆ ಸರ್ಕಾರಿ ಜಮೀನನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ನೀಡಬೇಕು ಎಂಬ ಸಮಾನ ಮನಸ್ಕರ ವೇದಿಕೆಯ ಬೇಡಿಕೆಯನ್ನು ಬಿಜೆಪಿ ಮುಕ್ತ ಮನಸ್ಸಿನಿಂದ ಬೆಂಬಲಿಸುವುದರೊಂದಿಗೆ ಜಮೀನು ಮಂಜೂರಾತಿಗೆ ಸರ್ಕಾರವನ್ನು ಆಗ್ರಹಪಡಿಸುತ್ತದೆ ಎಂದು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಕಳೆದ ಒಂದು ದಶಕದಿಂದ ನಿರಂತರವಾಗಿ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಮತ್ತು ಸಾಮಾಜಿಕ ಚುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಸಂಸ್ಥೆಗೆ ಅಗತ್ಯವಾಗಿರುವ ಜಮೀನು ಮಂಜೂರು ಮಾಡಿದಲ್ಲಿ ಚಟುವಟಿಕೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬೌದ್ಧ ವಿಹಾರ ಧಾಮ ಸ್ಥಾಪನೆ ಜೊತೆಗೆ ನಾಡಿನ ದಾರ್ಶನಿಕರ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಮತ್ತು ಜನ ಜಾಗೃತಿ ಮೂಡಿಸಲು ಈ ಕೇಂದ್ರಗಳನ್ನು ಸ್ಥಾಪನೆ ಮಾಡುವ ಉದ್ದೇಶ ಸಕರಾತ್ಮಕವಾಗಿದೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವೇದಿಕೆಯಾಗುವುದರಿಂದ ಇಂದು ಈ ಕೇಂದ್ರಗಳ ಸ್ಥಾಪನೆ ಅನಿವಾರ್ಯ ಮತ್ತು ಅಗತ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಚಟುವಟಿಕಳನ್ನು ನಡೆಸಲು ಅನುಕೂಲವಾಗುವಂತೆ ಎಲ್ಲಾ ವರ್ಗಗಳ ಸಮಾಜಗಳಿಗೆ ಜಮೀನು ಮಂಜೂರು ಮಾಡಿಕೊಡಲಾಗಿದೆ. ಆದರೆ, ಇದುವರೆಗೂ ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಬೌದ್ಧ ವಿಹಾರ ಧಾಮ ಸ್ಥಾಪನೆಯಂತ ವಿಚಾರಗಳಿಗೆ ಜಮೀನು ನೀಡಿರುವುದಿಲ್ಲ. ಈಗ ಸಮಾನ ಮನಸ್ಕರ ವೇದಿಕೆ ಜಮೀನು ಬೇಡಿಕೆ ಮುಂದಿಟ್ಟಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದರು.
ಈ ಪ್ರದೇಶದ ೯೨ನೆಯ ಸರ್ವೆ ನಂಬರಿನಲ್ಲಿರುವ ೪ ಎಕರೆ ಜಮೀನು ಮಂಜೂರಾಗಿರುವುದನ್ನು ೯೩ ನೆಯ ಸರ್ವೆ ನಂಬರಿಗೆ ಸೇರಿಸಿರುವುದು ಕಾನೂನು ಬಾಹಿರವಾಗಿದ್ದು, ಈ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳ ಕೈವಾಡ ಇರುವ ಬಗ್ಗೆ ಈಗಾಗಲೇ ಸಾರ್ವಜನಿಕವಾಗಿ ಜನರು ಮಾತನಾಡುತ್ತಿದ್ದಾರೆ.
ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಭೌದ್ಧ ವಿಹಾರ ಧಾಮಕ್ಕೆ ಜಮೀನು ಮಂಜೂರಾತಿ ವಿಚಾರದಲ್ಲಿ ಸಣ್ಣಪುಟ್ಟ ಕಾನೂನು ತೊಡಕುಗಳು ಇದ್ದಲ್ಲಿ ಅವುಗಳನ್ನು ಪರಿಹರಿಸಿ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಭೌದ್ಧ ವಿಹಾರ ಧಾಮ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದ ಹೋರಾಟಗಳಿಗೆ ಬಿಜೆಪಿ ಸದಾ ಬೆಂಬಲವಾಗಿರುತ್ತದೆ ಎಂದರು.
ಚಿಕ್ಕಮಗಳೂರಿನಲ್ಲಿ ಗೋಮಾಳ ಅಕ್ರಮ ಒತ್ತುವರಿ ಮತ್ತು ಮೈಸೂರಿನಲ್ಲಿ ಮೂಡಾ ನಿವೇಶನ ಹಗರಣಗಳು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊಡುಗೆಗಳಾಗಿವೆ ಎಂದು ಟೀಕಿಸಿದ ಅವರು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅರ್ಹರಿಗೆ ನ್ಯಾಯ ಕೊಡಿಸಬೇಕೆಂದು ಬಿಜೆಪಿ ಒತ್ತಾಯಿಸುತ್ತದೆ ಎಂದರು.
ಜಿಲ್ಲಾ ಮಾಧ್ಯವ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಸಹ ವಕ್ತಾರ ಕೇಶವ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಿಂತಾ ಅನಿಲ್ಕುಮಾರ್, ದಿನೇಶ್ ಇತರರು ಇದ್ದರು.
Government land should be given to Dr. BR Ambedkar Study Institute