ಚಿಕ್ಕಮಗಳೂರು: ಬೆಂಗಳೂರು ಮತ್ತು ಮೈಸೂರು, ಹಾಸನದಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರೆಗೆ ರಾಷ್ಟ್ರೀಯ ಹೆದ್ದಾರಿ ೨೭೩ ನ್ನು ವಿಸ್ತರಿಸುವಂತೆ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಮನವಿ ಸಲ್ಲಿಸಿರುವುದಾಗಿ ರಾಜ್ಯ ಜಾತ್ಯಾತೀತ ಜನತಾದಳದ ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಅವರು ರಾಷ್ಟ್ರೀಯ ಹೆದ್ದಾರಿ ಬಾಳೇಹೊನ್ನೂರು-ಕೊಪ್ಪ ಮೂಲಕ ಆಗುಂಬೆ ತಲುಪುವಂತೆ ಮಾಡಬೇಕು. ಕಳೆದ ೧೨ ವರ್ಷಗಳ ಹಿಂದೆ ಅನುಮೋದನೆಗೊಂಡ ಬಿಳಿಕೆರೆ-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಕಾರ್ಯಾರಂಭ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಬಿಳಿಕೆರೆ-ಹಾಸನ-ಬೇಲೂರು ಮಾರ್ಗವಾಗಿ ೧೩೧ ಕಿ.ಮೀ ರಸ್ತೆ ಚಿಕ್ಕಮಗಳೂರುವರೆಗೆ ಮಂಜೂರಾತಿ ಆಗಿದ್ದು, ಒಟ್ಟಾರೆ ಬಿಳಿಕೆರೆಯಿಂದ ಚಿಕ್ಕಮಗಳೂರಿಗೆ ೨೭೩ ರಾಷ್ಟ್ರೀಯ ಹೆದ್ದಾರಿಯಾಗಿ ಮಂಜೂರಾತಿ ಆಗಿದ್ದು, ಆದರೆ ಈವರೆಗೂ ಈ ರಸ್ತೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ ಎಂದು ದೂರಿದ್ದಾರೆ.
ಬೆಂಗಳೂರು-ಮೈಸೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರಸ್ತೆ ಅಭಿವೃದ್ಧಿ ವಿಳಂಭವಾಗಿರುವುದರಿಂದ ತುಂಬಾ ಅನಾನುಕೂಲವಾಗಿದೆ ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ರಸ್ತೆಯನ್ನು ಕೈಗೆತ್ತಿಕೊಂಡು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತೆ ಒತ್ತಾಯಿಸಿದ್ದಾರೆ.
ಶೃಂಗೇರಿಯಿಂದ ಅಗಳಗಂಡಿ, ಜೈಪುರ, ಬಾಳೇಹೊನ್ನೂರು ಮಾರ್ಗವಾಗಿ ವಸ್ತಾರೆವರೆಗೆ ೭೭ ಕಿ.ಮೀ ರಸ್ತೆ ೨೦೧೬ ರಲ್ಲಿ ಮಂಜೂರಾತಿ ದೊರೆತಿದ್ದು ಆದರೆ ಈ ಯೋಜನೆಯು ಇದೂವರೆಗೂ ಮಂಜೂರಾತಿ ಹಂತದಲ್ಲಿದೆಯೇ ಹೊರತು ಕಾಮಗಾರಿ ಸ್ಥಗಿತಗೊಂಡಿದೆ ಎಂದು ತಿಳಿಸಿದ್ದಾರೆ.
ಸುಮಾರು ೧ ಲಕ್ಷ ಜನಸಂಖ್ಯೆ ಉಳ್ಳ ಕೊಪ್ಪ ತಾಲೂಕಿಗೆ ರಾಷ್ಟ್ರೀಯ ಹೆದ್ದಾರಿಯ ಅವಶ್ಯಕತೆ ಇದ್ದು, ತೀರ್ಥಹಳ್ಳಿ, ಆಗುಂಬೆ, ಶೃಂಗೇರಿ, ಎನ್.ಆರ್ ಪುರ ಬಾಳೇಹೊನ್ನೂರಿನ ಮಧ್ಯಭಾಗದಲ್ಲಿದ್ದು, ಯಾವುದೇ ರಾಷ್ಟ್ರೀಯ ಹೆದ್ದಾರಿಗಳು ಈ ಭಾಗದಲ್ಲಿ ಹಾದುಹೋಗದಿರುವುದರಿಂದ ಕೊಪ್ಪ ಪಟ್ಟಣವೊಂದು ದ್ವೀಪವಾಗಿ ಪರಿಣಮಿಸಿದೆ ಎಂದು ಆರೋಪಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಈ ನಮ್ಮ ಬಹಾಳ ದಿನಗಳ ಬೇಡಿಕೆಯನ್ನು ಈಡೇರಿಸುತ್ತೀರೆಂಬ ಆಶಾಭಾವನೆಯಿಂದ ತಮಗೆ ಮನವಿ ಸಲ್ಲಿಸಿದ್ದು, ಈ ರಾಷ್ಟ್ರೀಯ ಹೆದ್ದಾರಿಯು ಚಿಕ್ಕಮಗಳೂರು ಮೂಲಕ ಆಲ್ದೂರು, ಬಾಳೇಹೊನ್ನೂರು, ಜೈಪುರ, ಕೊಪ್ಪ ಮತ್ತು ಹರಿಹರಪುರ ಮಾರ್ಗವಾಗಿ ಆಗುಂಬೆಗೆ ತಲುಪಲು ರಾಷ್ಟ್ರೀಯ ಹೆದ್ದಾರಿಯ ಅವಶ್ಯಕತೆ ಇದ್ದು ಕೂಡಲೇ ಕಾಮಗಾರಿಗೆ ಕೇಂದ್ರಸರ್ಕಾರದಿಂದ ಹಣ ಮಂಜೂರು ಮಾಡಿಸಿ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದ್ದಾರೆ.
Demand to start work on National Highway-273