ಚಿಕ್ಕಮಗಳೂರು: ತಾಲ್ಲೂಕಿನ ರೈತರ ಬಹು ನಿರೀಕ್ಷಿತ ಯೋಜನೆಗಳಾದ ಭದ್ರಾ ಉಪ ಕಣಿವೆ ಯೋಜನೆ ಹಾಗೂ ರಣಘಟ್ಟ ಯೋಜನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅವರು ಸದನದಲ್ಲಿ ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ವಿಷಯ ಪ್ರಸ್ತಾಪಿಸಿದ ಶಾಸಕರು ಭದ್ರಾ ಉಪ ಕಣಿವೆಯಿಂದ ಚಿಕ್ಕಮಗಳೂರು, ತರೀಕೆರೆ ಹಾಗೂ ಕಡೂರು ತಾಲ್ಲೂಕುಗಳ ೧೯೭ ಕೆರೆಗಳನ್ನು ತುಂಬಿಸುವ ಯೋಜನೆಗೆ ಈಗಾಗಲೇ ಮೊದಲ ಮತ್ತು ಎರಡನೇ ಹಂತದ ಟೆಂಡರ್ ಕರೆದು ಕಾಮಗಾರಿ ಪ್ರಗತಿಯಲ್ಲಿದೆ. ಉಪ ಮುಖ್ಯಮಂತ್ರಿಗಳು ತರೀಕೆರೆಗೆ ಆಗಮಿಸಿ ಭೂಸ್ವಾಧೀನ ಪ್ರಕ್ರಿಯೆಗೂ ಚಾಲನೆ ನೀಡಿದ್ದಾರೆ ಎಂದರು.
ಪ್ರಸಕ್ತ ೨೦೨೪ ಕ್ಕೆ ಯೋಜನೆ ಪೂರ್ಣಗೊಳ್ಳಬೇಕಿತ್ತು. ಈಗ ೨೦೨೫ಕ್ಕೆ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ. ಆದರೆ ಎರಡನೇ ಹಂತದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಜುಲೈ ತಿಂಗಳಲ್ಲಿ ಮೂರು ಮತ್ತು ನಾಲ್ಕನೇ ಹಂತದ ಟೆಂಡರ್ ಕರೆಯುವುದಾಗಿ ತಿಳಿಸಿದ್ದರು. ಟೆಂಡರ್ ಪ್ರಕ್ರಿಯೆ ಆರಂಭಿಸಲು ಉಪ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ ಎಂದರು.
ಅದೇ ರೀತಿ ರಣಘಟ್ಟ ಯೋಜನೆಯಿಂದ ಬೇಲೂರು ತಾಲ್ಲೂಕಿನ ೭ ಕೆರೆಗಳು ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಬೆಳವಾಡಿ ಕೆರಗಳನ್ನು ತುಂಬಿಸುವುದಾಗಿದೆ. ೧೨೫ ಕೋಟಿ ರೂ ಯೋಜನೆ ಇದಾಗಿದ್ದು,. ಆದಷ್ಟು ಬೇಗನೆ ಈ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರಿಸಿ, ಎರಡೂ ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತಿದೆ. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
Request for speedy completion of Ranaghatta Bhadra sub-basin projects