ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಳೆದೊಂದು ವಾರ ಮಳೆ ಅಬ್ಬರಿಸಿತ್ತು. ಆದರೆ ಕಳೆದ ಎರಡ್ಮೂರು ದಿನಗಳಿಂದ ಮಳೆ ಕಡಿಮೆಯಾಗಿದ್ದರೂ ಬೀಸ್ತಿರೋ ರಣ ಗಾಳಿಗೆ ಬೃಹತ್ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದೆ.
ವಸ್ತಾರೆ ಸಮೀಪದ ಆಮೆಕಟ್ಟೆ ಬಳಿ ರಣ ಗಾಳಿಗೆ ೬೬ ಕೆ.ವಿ ವಿದ್ಯುತ್ ಟವರ್ ಅರ್ಧಕ್ಕೆ ಮುರಿದು ಬಿದ್ದಿದೆ. ಇದರಿಂದಾಗಿ ಆಲ್ದೂರು ಹೋಬಳಿಯ ಹತ್ತಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಬಂದ್ ಆಗಿದ್ದು, ಇನ್ನು ಎರಡು ದಿನ ಕತ್ತಲಲ್ಲಿ ಗ್ರಾಮದ ಜನರು ಕಳೆಯುವಂತೆ ಆಗಿದೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಜೊತೆಗೆ ಗಂಟೆಗೆ ೪೫ ರಿಂದ ೫೦ ಕಿಲೋಮೀಟರ್ ವೇಗದಲ್ಲಿ ಗಾಳಿಯು ಬೀಸುತ್ತಿರುವುದರಿಂದ ಹಾನಿಯ ಪ್ರಮಾಣ ಹೆಚ್ಚಾಗಿದೆ. ಭಾರಿ ಗಾಳಿಯಿಂದಾಗಿ ಮನೆಗಳ ಮೇಲೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು ಹೆಚ್ಚಿನ ಹಾನಿ ಸಂಭವಿಸಿದೆ
ಭಾರಿ ಮಳೆಯಿಂದಾಗಿ ಜಿಲ್ಲೆಯಲ್ಲಿ ೧೮೪೯ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಿಂದಾಗಿ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಈಗಾಗಲೇ ೧೬೯೩ ವಿದ್ಯುತ್ ಕಂಬಗಳನ್ನು ಬದಲಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.
ಹೆಚ್ಚು ಮಳೆ ಬೀಳುತ್ತಿರುವ ಪ್ರದೇಶ ಹಾಗೂ ವಾಹನಗಳು ಹೋಗಲು ಸಾಧ್ಯವಾಗದಿರುವ ತಳಗಳಲ್ಲಿ ಮಾತ್ರ ಇದುವರೆಗೆ ವಿದ್ಯುತ್ ಕಂಬಗಳನ್ನು ಬದಲಿಸಲು ಸಾಧ್ಯವಾಗಿಲ್ಲ.
ಕೆಲವು ಗ್ರಾಮಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡಲು ಎರಡು ಮೂರು ದಿನವಾಗುತ್ತಿದೆ. ಒಮ್ಮೆ ವಿದ್ಯುತ್ ಲೈನ್ ಸರಿಪಡಿಸಿ ಬಂದ ಬಳಿಕ ಮತ್ತೆ ಅದೇ ಲೈನ್ ಮೇಲೆಯೇ ಮರಗಳು ಬೀಳುತ್ತಿರುವುದರಿಂದಾಗಿ ಸಮಸ್ಯೆ ಹೆಚ್ಚಾಗಿದೆ
1849 electricity poles were damaged in the district due to rain