ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಇದರಿಂದಾಗಿ ಮರಗಳು ಧರೆಗುರುಳುತ್ತಿವೆ. ಚಲಿಸುತ್ತಿರುವ ವಾಹನಗಳ ಮೇಲೆಯೇ ಮರಗಳು ಬೀಳುತ್ತಿರುವುದರಿಂದಾಗಿ ವಾಹನ ಸವಾರರು ಜೀವ ಭಯದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಹೌದು ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಧಾರಾಕಾರ ಮಳೆ ಮುಂದುವರೆದಿದೆ ಇದರಿಂದಾಗಿ ರಸ್ತೆ ಪಕ್ಕದಲ್ಲಿರುವ ಮರಗಳು ವಾಹನಗಳ ಮೇಲೆಯೇ ಬೀಳುತ್ತಿವೆ. ಗುರುವಾರ ಹಾಗೂ ಶುಕ್ರವಾರ ಜಿಲ್ಲೆಯ ವಿವಿಧಡೆ ವಾಹನಗಳ ಮೇಲೆ ಮರಗಳು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಆಲ್ದೂರು ಸಮೀಪ ಗುರುವಾರ ಸಂಜೆ ಚಲಿಸುತ್ತಿದ್ದ ಕಾರಿನ ಮೇಲೆಯೇ ಮರಬಿದ್ದಿದೆ. ಆದರೆ ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದರಭಸಕ್ಕೆ ಕಾರು ಜಖಂಗೊಂಡಿದೆ. ಆಲ್ದೂರು ಹಾಗೂ ಬಾಳೆಹೊನ್ನೂರು ಮಾರ್ಗಧ್ಯದಲ್ಲಿ ರಸ್ತೆ ಮೇಲೆ ಮರಬೀಳುವುದು ಸಾಮಾನ್ಯ ಎನ್ನುವಂತಾಗಿದೆ.
ಇನ್ನು ನಗರದ ಹೊರವಲಯದ ಗವನಹಳ್ಳಿ ಬಳಿ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ಮರ ಒಂದು ಎರಡು ಕಾರುಗಳ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಎರಡು ಕಾರುಗಳು ಜಖಂ ಆಗಿವೆ. ಜೊತೆಗೆ ಪಕ್ಕದಲ್ಲಿಯೇ ಇದ್ದ ಆಟೋ ಸಂಪೂರ್ಣ ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಚಿಕ್ಕಮಗಳೂರಿನಿಂದ ತರೀಕೆರೆಗೆ ಸಾಗುವ ಮಾರ್ಗ, ಶೃಂಗೇರಿ, ಕೊಪ್ಪ, ಕಳಸ ಭಾಗದಲ್ಲಿಯೂ ನಿರಂತರವಾಗಿ ಮರಗಳು ಆರಂಭಿಸಿವೆ. ಭಾರಿ ಮಳೆಗೆ ಮರಗಳು ಧರೆಗೆ ಉರುಳುತ್ತಿರುವುದರಿಂದ ವಿದ್ಯುತ್ ಕಂಬಗಳಿಗೂ ಹಾನಿಯಾಗುತ್ತಿದೆ ಇದರಿಂದಾಗಿ ಮಲೆನಾಡಿನ ಹಳ್ಳಿಗಳು ಕತ್ತಲೆಗೆ ಜಾರಿವೆ.
ಶಾಲೆಗಳಿಗೆ ರಜೆ ಘೋಷಣೆ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆರು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಕೊಪ್ಪ, ಕಳಸ, ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ, ಎನ್.ಆರ್.ಪುರ ತಾಲೂಕಿನ ಎಲ್ಲಾ ಅಂಗನವಾಡಿ, ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇನ್ನೂ ಹೆಚ್ಚಿನ ಮಳೆ ಆಗುವ ಸಾಧ್ಯತೆ ಇದೆ.
Trees swaying from heavy rain