ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ೨೦ ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದರಿಂದ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಭಾರಿ ಹಾನಿ ಸಂಭವಿಸಿದೆ. ಹತ್ತಾರು ಮನೆಗಳು ಧರೆಗುರುಳಿದ್ದು, ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಎಸ್ಪಿ ವಿಕ್ರಮ ಅಮಟೆ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿವಿಧ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಸಂತ್ರಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಜಿಲ್ಲೆಯ ಕುನ್ನಹಳ್ಳಿ, ಹವಳ್ಳಿ, ಚಂಡುಗೋಡು, ಅರೆನೂರು ಕಾಳಜಿ ಕೇಂದ್ರ, ಶೃಂಗೇರಿಯ ಉತ್ತಿನ ಗದ್ದೆ, ಬಸರಿಕಟ್ಟೆ, ನಾರ್ವೆ ಪ್ರದೇಶಗಳಿಗೆ ಭೇಟಿ ನೀಡಿ ಮಳೆಯಿಂದ ಆದ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಕೂಡಲೇ ಮೊದಲ ಕಂತಿನ ಪರಿಹಾರ ನೀಡುವ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆ ಮಂಜೂರು ಮಾಡುವಂತೆ ಸಚಿವ ಕೆ.ಜೆ.ಜಾರ್ಜ್ ಡಿಸಿ ಮೀನಾ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕಂಡರಿಯದಂಥ ಮಳೆ ಬಂದಿದೆ. ಮಳೆಯೊಂದಿಗೆ ಗಾಳಿಯೂ ರಭಸವಾಗಿ ಬೀಸುತ್ತಿರುವುದರಿಂದಾಗಿ ಹಾನಿಯ ಪ್ರಮಾಣ ಹೆಚ್ಚಾಗಿದೆ. ಈಗಾಗಲೇ ಮನೆ ಕಳೆದುಕೊಂಡವರಿಗೆ ಬದಲಿ ವ್ಯವಸ್ಥೆ ಮಾಡಿz?ದೇವೆ. ಅವರಿಗೆ ಪರಿಹಾರ ನೀಡುವ ಜೊತೆಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಯನ್ನು ಮಂಜೂರು ಮಾಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಮಾಡಿದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಮರ ಬಿದ್ದ ಪರಿಣಾಮ ವಿದ್ಯುತ್ ಲೈನ್ಗಳು ಹಾಗೂ ಕಂಬಗಳಿಗೆ ತೀವ್ರ ಹಾನಿಯಾಗಿದೆ. ಇದನ್ನು ಸರಿಪಡಿಸಲು ಕೆಲ ಸಮಯ ಬೇಕಾಗುತ್ತದೆ. ಕಾಡಿನ ಮಧ್ಯೆ ವಿದ್ಯುತ್ ಲೈನ್ಗಳಿಗೆ ಹಾನಿಯಾಗಿರುವುದರಿಂದ ಅಲ್ಲಿಗೆ ತೆರಳಿ ಸರಿಪಡಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಮಲೆನಾಡು ಭಾಗಕ್ಕೆ ೫೫೦ ಲೈನ್ಮನ್ಗಳು ಇದ್ದರು.
ಈಗಾಗಲೇ ಬಯಲುಸೀಮೆ ಭಾಗದ ಲೈನ್ಮನ್ಗಳನ್ನೂ ಮಲೆನಾಡು ಭಾಗಕ್ಕೆ ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಮಂಗಳೂರು ಭಾಗದಿಂದಲೂ ಲೈನ್ಮನ್ಗಳನ್ನು ಕರೆಯಿಸಿಕೊಂಡು ಶೀಘ್ರವೇ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ದಾಖಲೆ ಇಲ್ಲದ ಮನೆಗಳೂ ಮಳೆಯಿಂದ ಬಿದ್ದಿದ್ದರೆ ಅವುಗಳಿಗೂ ಒಂದು ಲಕ್ಷ ಪರಿಹಾರ ನೀಡಲು ಕ್ಯಾಬಿನೇಟ್ ಸಭೆಯಲ್ಲಿ ತಿರ್ಮಾನ ಮಾಡಲಾಗಿದೆ. ಈ ಬಗ್ಗೆ ಸೋಮವಾರ ಅಧಿಕೃತ ಆದೇಶ ಹೊರಬರುವ ಸಾಧ್ಯತೆಯಿದೆ. ಕೆಲವರು ಡೀಮ್ಡ್ ಫಾರೆಸ್ಟ್ ಹಾಗೂ ಸರ್ಕಾರಿ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಇವರ ಬಳಿ ಮನೆಗಳಿಗೆ ಸಂಬಂಧಿಸಿದಂತೆ ಯಾವ ದಾಖಲೆಗಳೂ ಇಲ್ಲ. ಹೀಗಾಗಿ ಇವರಿಗೆ ಪರಿಹಾರ ನೀಡಲು ಬರುತ್ತಿರಲಿಲ್ಲ. ಮಾನವೀಯ ದೃಷ್ಟಿಯಿಂದ ಅಂಥವರಿಗೂ ಪರಿಹಾರ ನೀಡಲು ಕ್ರಮ ಕೈಗೊಂಡಿರುವುದಾಗಿ ಮಾಹಿತಿ ನೀಡಿದರು.
Minister-in-charge KJ George visited the affected areas