ಚಿಕ್ಕಮಗಳೂರು: ಭಕ್ತರನ್ನು ಬಿಟ್ಟು ಸ್ವಾಮಿಗಳಿಲ್ಲ, ಸ್ವಾಮಿಗಳನ್ನು ಬಿಟ್ಟು ಭಕ್ತರಿಲ್ಲ ಇಬ್ಬರೂ ಕೂಡಿದಾಗ ಮಾತ್ರ ಬಸವ ಮಂದಿರದ ಮಹಾ ಮಠ ಬೆಳಗಲು ಸಾಧ್ಯ ಎಂದು ಅಥಣಿ ಶ್ರೀ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಹೇಳಿದರು.
ನಗರದ ಕಲ್ಯಾಣ ನಗರ ಶ್ರೀ ಬಸವ ತತ್ವ ಪೀಠದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಅವರ ಪೀಠಾರೋಹಣದ ೪ ನೇ ವರ್ಷಾಚರಣೆ, ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ೮ನೇ ಮುದ್ರಣದ ಸಮಾಜಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಿಕ್ಕಿದ್ದೆಲ್ಲವನ್ನೂ ಬೇಕು ಬೇಕು ಎನ್ನುವ ಬದಲು ಬಸವ ಪೀಠದ ಗುರುಗಳ ಅನುಭಾವ ಅಮೃತವೇ ಎಲ್ಲಕಿಂತ ಮಿಗಿಲು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಕಾಶಿ ಗಂಗಾಕ್ಕಿಂತಲೂ ನಮ್ಮ ಮನೆಯ ನಲ್ಲಿಯಲ್ಲಿ ಹರಿಯುವ ನೀರು ಸಹ ಶ್ರೇಷ್ಟ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು.
ಈ ನೆಲದ ಪವಿತ್ರ ಗುಣವನ್ನು ಬಸವಾದಿ ಶಿವಶರಣರು ಎತ್ತಿ ಹಿಡಿದರು. ಬಸವಣ್ಣ ಅವರು ಯಾವುದೋ ಒಂದು ರಾಜ್ಯಕ್ಕೆ ಮಂತ್ರಿಯಾಗಿದ್ದಕ್ಕೆ ಸಾಂಸ್ಕೃತಿಕ ನಾಯಕರಲ್ಲ. ಬಿದ್ದವರ ಜೊತೆ, ನೊಂದವರು, ನಿರಾಶ್ರಿತರ ಜೊತೆ ತನ್ನನ್ನು ತಾನು ಗುರುತಿಸಿಕೊಂಡು ಎಲ್ಲರೂ ನಮ್ಮವರು ಎಂದು ತಬ್ಬಿಕೊಂಡರು ಅದಕ್ಕಾಗಿ ಸಾಂಸ್ಕೃತಿಕ ನಾಯಕರಾದರು ಎಂದರು.
ಶ್ರೀಮಠದ ಭಕ್ತರಿಂದ ಗುರುವಂದನೆ ಸ್ವೀಕರಿಸಿದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಶ್ರೀ ಬಸವತತ್ತ್ವ ಪೀಠದ ಪೀಠಾಧ್ಯಕ್ಷರಾಗಿ ಜವಾಬ್ದಾರಿವಹಿಸಿಕೊಂಡು ಇಂದಿಗೆ ನಾಲ್ಕು ವರ್ಷಗಳು ತುಂಬಿದವು. ಪೂಜ್ಯ ಶ್ರೀ ಮ. ನಿ. ಪ್ರ. ಜಯಚಂದ್ರಶೇಖರ ಮಹಾಸ್ವಾಮಿಗಳು ಸ್ಥಾಪಿಸಿದ ಈ ಪೀಠವು ಶ್ರೀ ಬಸವತತ್ತ್ವ ಪೀಠ ಹೆಸರಿನ ನಾಡಿನ ಏಕೈಕ ಪೀಠವಾಗಿದೆ ಎಂದರು.
ಭಕ್ತರೊಂದಿಗೆ ಸೇರಿ ನಾವು ಶ್ರೀ ಪೀಠದ ಮೂಲಕ ಮಾಡಿದ ಹಲವು ವಿಧಾಯಕ ಕಾರ್ಯಗಳು ಕಣ್ಮುಂದೆ ಬರುತ್ತವೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಒಂದೇ ದಿನ ಸಾವಿರ ಜನರಿಗೆ ಸರ್ಕಾರದ ಸಹಭಾಗಿತ್ವದಲ್ಲಿ ಕೋವಿಡ್ ಲಸಿಕೆ ಹಾಕಿಸಿದ್ದು, ಸಾವಿರಾರು ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರಕ್ತಾಮೃತ ದಾಸೋಹ ಮಾಡಿದ್ದು, ಜನಪರ ಕಾಳಜಿಯ ಈ ಕಾರ್ಯಗಳು ನಮಗೆ ಅತ್ಯಂತ ಸಂತೃಪ್ತಿಯನ್ನು ನೀಡಿವೆ ಎಂದರು.
ಭಕ್ತರೆಡೆಗೆ ಗುರುವಿನ ನಡಿಗೆ ಕಾರ್ಯಕ್ರಮವಂತೂ ಶ್ರೀ ಮಠದ ವತಿಯಿಂದ ನಡೆದ ಧಾರ್ಮಿಕ ಮತ್ತು ಸಾಮಾಜಿಕ ನೆಲೆಯ ಮಹತ್ವದ ಕಾರ್ಯಕ್ರಮವಾಗಿತ್ತು. ಒಂದು ಜನಾಂದೋಲನದ ರೀತಿಯಲ್ಲಿ ನಡೆದ ಈ ಕಾರ್ಯಕ್ರಮವು ನಮ್ಮೊಂದಿಗೆ ಒಂದು ತಿಂಗಳುಗಳ ಕಾಲ ಹೆಜ್ಜೆಹಾಕಿದ ಪ್ರತಿಯೊಬ್ಬರ ಬದುಕಿನಲ್ಲೂ ಗಣನೀಯ ಬದಲಾವಣೆಗಳನ್ನು ಮಾಡಿದೆ ಎಂದರೆ ಅದು ಅತಿಶಯೋಕ್ತಿಯೇನಲ್ಲ ಎಂದರು.
ಈ ಸಂದರ್ಭದಲ್ಲಿ ಕೋಡಿ ಹಳ್ಳಿಯ ಭೃಂಗೀಶ್ವರ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮಿ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರ ಆಪ್ತ ಕಾರ್ಯದರ್ಶಿ ಕೆ.ಸಿ.ವಿರೂಪಾಕ್ಷ, ಶಿಕಾರಿ ಪುರದ ಉದ್ಯಮಿ ಎನ್.ವಿ.ಈರೇಶ್, ಸಾಹಿತಿ ಚಟ್ನಳ್ಳಿ ಮಹೇಶ್, ಶ್ರೀಮಠದ ಟ್ರಸ್ಟಿಗಳು, ಖಜಾಂಚಿಗಳಾದ ಸದಾಶಿವಪ್ಪ, ಜಗದೀಶ್ ಬಾಬು, ಇಂಡಿಕಾ ಅರುಣ್, ಉಪ್ಪಳ್ಳಿ ಲೋಕೇಶ್, ಉಮೇಶ್, ರಾಜು, ಮಧು, ಶಶಿಧರ್, ಉಟ್ಟಣ್ಣ, ರಾಜೇಶ, ಚಂದ್ರಣ್ಣ ಮತ್ತು ಶ್ರೀಮಠದ ಭಕ್ತರು ಇದ್ದರು.
4th Anniversary of Swamiji’s Enthronement by Dr. Shri Basava of Sri Basava Tattva Peetha