ಚಿಕ್ಕಮಗಳೂರು: ಸರ್ಕಾರ ಮತ್ತು ಸಮಾಜದ ಮಧ್ಯೆ ಸೇತುವೆಯಾಗಿ ಕೆಲಸ ಮಾಡುವ ಜೊತೆಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಕರ್ತರ ಪಾತ್ರ ಅತಿ ಮುಖ್ಯ ಎಂದು ಬಸವಮಂದಿರ ಬಸವತತ್ವ ಪೀಠಾಧ್ಯಕ್ಷ ಶ್ರೀ ಡಾ. ಬಸವ ಮರುಳುಸಿದ್ದ ಸ್ವಾಮೀಜಿ ಅಭಿಪ್ರಾಯಿಸಿದರು.
ಅವರು ಬಸವಮಂದಿರ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ, ತಾಲ್ಲೂಕು ಸಂಘ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಮಸ್ಯೆಗಳಿಗೆ ಬೆಳಕು ಚೆಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವರಿಕೆ ಮಾಡುವ ಪತ್ರಕರ್ತರಿಗೆ ಭದ್ರತೆಯ ಕೊರತೆ ಇದ್ದು, ಈ ಬಗ್ಗೆ ಸೂಕ್ತ ಗಮನಹರಿಸಿ ಅಗತ್ಯ ಸೌಲಭ್ಯಗಳನ್ನು ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಬಿ.ಎನ್ ಚಿದಾನಂದ್ ಅವರು ಮಾತನಾಡಿ, ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದಂತೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ತಮ್ಮ ಹೊಣೆಯನ್ನರಿತು ಕಾರ್ಯ ನಿರ್ವಹಿಸುತ್ತಿದ್ದು, ಇಂದು ಪತ್ರಕರ್ತರ ಪರಿಸ್ಥಿತಿ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬ ಗಾದೆಯಂತಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಜೆ ಸುಜೇಂದ್ರ ಮಾತನಾಡಿ, ಪತ್ರಕರ್ತರ ದಿಟ್ಟ ನಿಲುವಿನಿಂದಾಗಿ ಸಮಾಜದಲ್ಲಿ ಉದ್ಭವಿಸುವ ಸಾಕಷ್ಟು ಸಮಸ್ಯೆಗಳು ಬಯಲಾಗಿ ಪರಿಹಾರ ದೊರಕಲು ಸಹಕಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್ ಮೂರ್ತಿ ಮಾತನಾಡಿ, ತಮ್ಮ ರಾಜಕೀಯ ಜೀವನದಲ್ಲಿ ಪತ್ರಕರ್ತರ ಒಡನಾಡ ಹೊಂದಿರುವ ನಾನು ಸಾಕಷ್ಟು ಅನುಭವ ಪಡೆದಿದ್ದು, ಪತ್ರಕರ್ತರು ಒಂದು ರೀತಿಯಲ್ಲಿ ನನಗೆ ಮಾರ್ಗದರ್ಶಕರಾಗಿದ್ದಾರೆಂದು ತಿಳಿಸಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಟಿ.ಎನ್.ಎ ಮೊದಲಿಯಾರ್ ಮಾತನಾಡಿ, ಪತ್ರಕರ್ತರು ಜವಾಬ್ದಾರಿ ಕರ್ತವ್ಯ ನಿರ್ವಹಿಸುವ ಜೊತೆಗೆ ಸಂಘಟನೆಯಲ್ಲಿ ನಂಬಿಕೆ ಇಟ್ಟು ಒಗ್ಗಟ್ಟಿನಿಂದ ಮುನ್ನಡೆಯಬೇಕೆಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ನಾರಿನಿಂಗಜ್ಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ. ಸಂತೋಷ್ ನೇತಾ, ಡಾ. ಯೋಗೀಶ್, ಡಾ. ಹೆಚ್.ಕೆ ಸಹದೇವ್, ಡಾ. ಹೆಚ್.ಬಿ ಚಂದ್ರಶೇಖರ್, ಡಾ. ಮಲ್ಲಿಕಾರ್ಜುನ್ ಇವರುಗಳನ್ನು ಸನ್ಮಾನಿಸಲಾಯಿತು. ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ವರದಿಗಾರ ಬಿ.ತಿಪ್ಪೇರುದ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜೇಗೌಡ ಸೇರಿದಂತೆ ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ಹಾಗೂ ನಿವೃತ್ತ ಕಾರ್ಮಿಕ ಅಧಿಕಾರಿ ಶಿವಶಂಕರಪ್ಪ, ನಿವೃತ್ತ ಎಎಸ್ಐ ಹೆಚ್.ಆರ್ ಷಡಾಕ್ಷರಿ ಭಾಗವಹಿಸಿದ್ದರು. ವಿಕಾಸ ಸಂಸ್ಥೆಯ ಅನುಸೂಯ, ಗೀತಾ, ಪುಷ್ಪ, ಲತಾ, ಸುವರ್ಣಮ್ಮ, ಸುಜಾತ, ಶಶಿಕಲಾ, ಶೋಭ ಇವರ ತಂಡದಿಂದ ವಚನಗಾಯನ ನಡೆಯಿತು
The Press Day was organized by the Association of Working Journalists