ಚಿಕ್ಕಮಗಳೂರು: ನಗರದ ಯಕ್ಷಸಿರಿ ನಾಟ್ಯವೃಂದದ ಸವಿ ನೆನಪಿಗಾಗಿ ಆ.೪ ರಂದು ಭಾನುವಾರ ಸಂಜೆ ೬ ಗಂಟೆಗೆ ಕುವೆಂಪು ಕಲಾಮಂದಿರದಲ್ಲಿ “ಶ್ರೀದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಹರಿಓಂ ಬಿಲ್ಡರ್ಸ್ನ ಮುಖ್ಯಸ್ಥ ಜಿ.ರಮೇಶ್ ತಿಳಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಕ್ಷಸಿರಿ ನಾಟ್ಯವೃಂದ, ಕಲ್ಕಟ್ಟೆ ಪುಸ್ತಕದ ಮನೆ, ಹರಿಓಂ ಬಿಲ್ಡರ್ಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಆಶ್ರಯದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಈ ಕಾರ್ಯಕ್ರಮವನ್ನು ಶಾಸಕ ಹೆಚ್.ಡಿ ತಮ್ಮಯ್ಯ ಉದ್ಘಾಟಿಸಲಿದ್ದು, ಕಾಸರಗೋಡಿನ ಯಕ್ಷಗಾನ ಕಣಿಪುರ ಮಾಸ ಪತ್ರಿಕೆ ಸಂಪಾದಕ ಎಂ.ನಾ ಚಂಬಲ್ತಿಮಾರ್ ಮತ್ತು ಖ್ಯಾತ ಮಕ್ಕಳ ತಜ್ಞ ಹಾಗೂ ಅಂಧ ಮಕ್ಕಳ ಶಾಲೆಯ ಸಂಸ್ಥಾಪಕ ಡಾ. ಜೆ.ಪಿ ಕೃಷ್ಣೇಗೌಡ ಇವರುಗಳನ್ನು ಗೌರವಿಸಲಾಗುವುದೆಂದು ಹೇಳಿದರು.
ಶ್ರೀದೇವಿ ಮಹಾತ್ಮೆಯ ಮಹಿಷಾಸುರ ಮರ್ದಿನಿ ಆಖ್ಯಾನಕದಲ್ಲಿ ಭಾಗವತರಾಗಿ ಮಂಗಳೂರಿನ ಶಾಲಿನಿ ಹೆಬ್ಬಾರ್, ಚಂಡೆವಾದನದಲ್ಲಿ ಮುರಾರಿ ಕಡಂಬಳಿತ್ತಾಯ, ಮದ್ದಳೆಯಲ್ಲಿ ಮಂಗಳೂರಿನ ವರುಣ್ ಹೆಬ್ಬಾರ್, ಚಕ್ರತಾಳದಲ್ಲಿ ಶೃಂಗೇರಿಯ ಮಹೇಶ್ ಕಾಕತ್ಕರ್ ಭಾಗವಹಿಸಲಿದ್ದಾರೆಂದು ತಿಳಿಸಿದರು.
ಮುಮ್ಮೇಳದಲ್ಲಿ ಅಶ್ವಥ್ ಕುಲಾಲ್, ರೇಖಾ ನಾಗರಾಜ್ರಾವ್, ಪರಮೇಶ್ವರ, ಶೋಭಾ ಪರಮೇಶ್ವರ, ಅನಿರುದ್ಧ ಎಂ. ಕಾಕತ್ಕರ್, ಅಪೂರ್ವ ವೆಂಕಟೇಶ್, ಯಶೋಧರ, ರವಿಶಂಕರ ಭಟ್ ಕೆ.ಎಸ್ ಶ್ರೀವತ್ಸ, ಶೃಂಗೇರಿಯ ಕುಲದೀಪ ಆಚಾರ್ಯ, ವೈಷ್ಣವಿ ಎನ್ ರಾವ್, ಸಂತೋಷ್ ಎಸ್ ಆಚಾರ್, ಕುಮಾರಿ ಹಿಮಗಿರಿ, ಕುಮಾರ ದಕ್ಷ, ಮಾನ್ಯ ಕುಂದರಗಿ, ಕುಮಾರಿ ಸುರಭಿ ವಿವಿಧ ಪಾತ್ರಗಳಲ್ಲಿ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ನಗರದ ಶ್ರೀಕೃಷ್ಣ ಶಾಮಿಯಾನದ ತಂಡದವರ ರಂಗವಿನ್ಯಾಸ, ಮಂಗಳೂರು ಮುಡುಪುವಿನ ಭಾರತಿ ಕಲಾ ಆರ್ಟ್ಸ್ನವರ ವೇಷಭೂಷಣ ಸಹಕಾರವಿದ್ದು, ಚಿಕ್ಕಮಗಳೂರು ನಗರದ ೯ ಮಹಿಳೆಯರ ಯಕ್ಷ ನರ್ತನ ಈ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಮೆರಗು ನೀಡಲಿದೆ. ಬಿಂಡಿಗ ದೇವಿರಮ್ಮ ದೆವಸ್ಥಾನದ ವ್ಯವಸ್ಥಾಪನಾ ಸಮಿತಿ, ಸಾಂಸ್ಕೃತಿಕ ಸಂಘ, ಮನೋರಂಜನಿ ಸಂಗೀತ ಮಹಾವಿದ್ಯಾಲಯ, ಹೋಟೆಲ್ ಸನ್ರೈಸ್, ಯಕ್ಷಗಾನ ಅಭಿಮಾನಿ ಬಳಗದವರ ಸಹಕಾರವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಾಯಕ ಮಲ್ಲಿಗೆ ಸುಧೀರ್, ಮಂಜುಳಾ ಮಹೇಶ್, ಶಿವಣ್ಣ ಉಪಸ್ಥಿತರಿದ್ದರು.
Performance of “Sridevi Mahatme” Yakshagana on August 4