ಚಿಕ್ಕಮಗಳೂರು: ಸಾರ್ವಜನಿಕರು ನಿಗದಿತ ಸಮಯಕ್ಕೆ ತೆರಿಗೆ ಪಾವತಿಸಿದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ತಿಳಿಸಿದರು.
ನಗರಸಭೆ ಕಾರ್ಯಾಲಯದಲ್ಲಿ ಇಂದು ತೆರಿಗೆ ವಸೂಲಾತಿಗೆ ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ನ್ನು ನಗರಸಭೆ ಸಿಬ್ಬಂದಿಗೆ ವಿತರಿಸಿ ಅವರು ಮಾತನಾಡಿದರು.
ಯಾವುದೇ ಒಂದು ವರ್ಗದಲ್ಲಿ ಆದಾಯದ ಕ್ರೋಢೀಕರಣ ಸಮರ್ಪಕವಾಗಿದ್ದರೆ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಾಧ್ಯ. ಸಾರ್ವಜನಿಕರು ನೀರು, ವಿದ್ಯುತ್, ಆಸ್ತಿ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆಗಳನ್ನು ನಿಗದಿತ ಸಮಯಕ್ಕೆ ಪಾವತಿಸಬೇಕು. ಆಧುನಿಕ ಯುಗದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಯಾವುದೇ ಕಾರ್ಯವನ್ನು ಶೀಘ್ರವಾಗಿ ಮಾಡಲು ಸಾಧ್ಯ.
ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಆಪ್ ನಿಂದ ಸಾರ್ವಜನಿಕರು ಪಾರದರ್ಶಕವಾಗಿ ಫೋನ್ ಪೇ, ಗೂಗಲ್ ಪೇ ಮತ್ತು ಯಾವುದೇ ರೀತಿಯ ಆನ್ ಲೈನ್ ಪೇಮೆಂಟ್ ಆಪ್ ಮೂಲಕ ತೆರಿಗೆ ಪಾವತಿ ಮಾಡಿ ಸ್ಥಳದಲ್ಲಿಯೇ ರಸೀದಿ ಪಡೆದುಕೊಳ್ಳಬಹುದಾಗಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಇದರಿಂದಾಗಿ ಸಾರ್ವಜನಿಕರು ಕಚೇರಿಗೆ ಬರುವ ಅವಶ್ಯಕತೆ ಇರುವುದಿಲ್ಲ ಸಮಯ ಉಳಿತಾಯವಾಗುತ್ತದೆ ಎಂದ ಅವರು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ನಗರಸಭೆ ಆಯುಕ್ತ ಬಿ. ಬಸವರಾಜ್ ಮಾತನಾಡಿ ನಗರಸಭೆಯಲ್ಲಿ ಒಟ್ಟು ೩೫,೫೩೫ ಆಸ್ತಿಗಳಿದ್ದು ಈ ಪೈಕಿ ೨೩,೩೪೮ ಕಟ್ಟಡಗಳು, ೪೫೩೬ ವಾಣಿಜ್ಯ ಕಟ್ಟಡಗಳು, ೭೫ ಕೈಗಾರಿಕಾ ಕಟ್ಟಡಗಳು ಮತ್ತು ೭೫೭೬ ಖಾಲಿ ನಿವೇಶನಗಳಿವೆ. ಆಸ್ತಿ ತೆರಿಗೆ ಒಟ್ಟು ಬೇಡಿಕೆ ೧೫.೩೫ ಕೋಟಿ ಇದ್ದು ಇದರಲ್ಲಿ ೮.೮೬ ಕೋಟಿ ವಸೂಲಿಯಾಗಿದೆ.
ನೀರಿನ ಕಂದಾಯ ಒಟ್ಟು ಬೇಡಿಕೆ ೮.೮೮ ಕೋಟಿ ಇದ್ದು ಒಟ್ಟು ೧೮೫೬೭ ವಸತಿ, ೪೫೬ ವಾಣಿಜ್ಯ, ೭೫ ಕೈಗಾರಿಕಾ ಸಂಪರ್ಕಗಳಿವೆ ಇವುಗಳಲ್ಲಿ ೧.೧೯ ಕೋಟಿ ಕಂದಾಯ ವಸೂಲಿಯಾಗಿದ್ದು ಬಾಕಿ ವಸೂಲಾತಿಗೆ ಮನೆ ಮನೆಗೆ ತೆರಳಿ ತಿಳುವಳಿಕೆ ನೀಡಲಾಗುತ್ತಿದೆ ಎಂದರು.
ಮಳಿಗೆ ಬಾಡಿಗೆ ಬೇಡಿಕೆ ೧.೪೭ ಕೋಟಿ ಇದ್ದು ೫೫.೬೩ ಲಕ್ಷ ವಸೂಲಿಯಾಗಿದೆ. ಉದ್ದಿಮೆ ಪರವಾನಗಿ ಒಟ್ಟು ಬೇಡಿಕೆ ೮೧.೪ ಲಕ್ಷಗಳಿದ್ದು, ೩೧ ಲಕ್ಷ ವಸೂಲಿಯಾಗಿದೆ. ಬಾಕಿ ವಸೂಲಾತಿಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಬಾಡಿಗೆ ಕಟ್ಟದೇ ಇರುವ ಮಳಿಗೆಗಳಿಗೆ ಬಾಗಿಲು ಹಾಕಿಸುವಂತಹ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ವೈರ್ ಲೆಸ್ ಥರ್ಮಲ್ ಪ್ರಿಂಟರ್ ಮತ್ತು ಫೋನ್ ಆಪ್ ನ ಸಹಾಯ ಪಡೆದು ಕಡ್ಡಾಯವಾಗಿ ತೆರಿಗೆ ಪಾವತಿಸಿ ಎಂದರು. ಕಾರ್ಯಕ್ರಮದಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿ ಹಾಜರಿದ್ದರು.
Distribution of wireless thermal printer and phone to municipal staff for tax collection