ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್‌ಪೋ-೨೦೨೪
ಚಿಕ್ಕಮಗಳೂರು: ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಗಸ್ಟ್ ೨೪ ಮತ್ತು ೨೫ ರಂದು ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್‌ಪೋ-೨೦೨೪ ಹಮ್ಮಿಕೊಳ್ಳಲಾಗಿದೆ ಎಂದು ವರ್ಷ ಅಭಿಷೇಕ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಮಕ್ಕಳ ವೃದ್ಯ.ಜೆ.ಪಿ.ಕೃಷ್ಣೇಗೌಡ ಅವರ ಪುತ್ರಿ ವರ್ಷ, ಕೆಂಪನಹಳ್ಳಿಯ ಆಶಾಕಿರಣ ಚಾರಿಟಬಲ್‌ಟ್ರಸ್ಟ್, ತಾವೇ ಬೆಂಗಳೂರಿನಲ್ಲಿ ಸ್ಥಾಪಿಸಿರುವ ಮೈಕೋಶ ಸಂಸ್ಥೆ ಸಹಯೋಗದಲ್ಲಿ ನಡೆಯುವ ಮಲೆನಾಡು ಮಹೋತ್ಸವಕ್ಕೆ ಸುಮಾರು ೧೦೦ ಮಳಿಗೆಗಳು ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.
ಆಗಸ್ಟ್ ೨೩ ರಂದು ಸಂಜೆ ೫.೩೦ಕ್ಕೆ ಮಹೋತ್ಸವದ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು, ಸಚಿವರು ಮತ್ತು ಶಾಸಕರು ಆಗಮಿಸಲಿದ್ದಾರೆ. ಆ.೨೪ ಮತ್ತು ೨೫ ರಂದು ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್‌ಪೋ ನಡೆಯುತ್ತಿದ್ದು, ಇದಕ್ಕೆ ಆಗಮಿಸುವವರು ೫೦ ರೂ. ನೀಡಿ ಪಾಸ್ ಪಡೆದುಕೊಳ್ಳಬೇಕಾಗಿದೆ. ಇದರಿಂದ ಸಂಗ್ರಹವಾಗುವ ಹಣದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ೮-೧೦ ವಸತಿ ಗೃಹ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಕಳೆದ ೩೪ ವರ್ಷಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ೧೬ ವರ್ಷದೊಳಗಿನ ಅಂಧಬಾಲಕ, ಬಾಲಕಿ ಯರಿಗೆ ಉಚಿತ ವಸತಿಯೊಂದಿಗೆ ಶಿಕ್ಷಣ ಮತ್ತು ವಿವಿಧ ತರಬೇತಿ ನೀಡುತ್ತಿರುವ ಆಶಾಕಿರಣ ಅಂಧಮಕ್ಕಳ ಶಾಲೆಗೆ ಆರ್ಥಿಕ ಸಹಾಯ ನೀಡುವುದೇ ಮಹೋತ್ಸವದ ಮುಖ್ಯ ಉದ್ದೇಶವೆಂದು ತಿಳಿಸಿದರು.
ಆಶಾಕಿರಣ ಚಾರಿಟಬಲ್‌ಟ್ರಸ್ಟ್ ಕರ್ನಾಟಕ ಅಂಧರ ಒಕ್ಕೂಟದ ಸಂಸ್ಥೆಯ ಪೂರಕ ಸಂಸ್ಥೆಯಾಗಿದೆ. ೧೯೯೦ ರಲ್ಲಿ ನಗರದ ಕೆಂಪನಹಳ್ಳಿಯಲ್ಲಿ ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ಶಾಲೆಯನ್ನು ಸ್ಥಾಪಿಸಲಾಯಿತು. ೩೪ ವರ್ಷದಿಂದ ಸರ್ಕಾರದ ಭಾಗಶಃ ಅನುದಾನ ಮತ್ತು ನೆರವಿನಿಂದ ಅಂಧ ಬಾಲಕ, ಬಾಲಕಿಯರಿಗೆ ಬ್ರೈ ಲ್‌ಲಿಪಿಯಲ್ಲಿ ಶಿಕ್ಷಣ ನೀಡುವುದರೊಂದಿಗೆ ಸಂಗೀತ, ತಾಳವಾದ್ಯ, ಕಂಪ್ಯೂಟರ್, ಕೈ ಕಸುಬು, ಆಟೋ ಟ ತರಬೇತಿಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಔಷಧೋ ಪಚಾರಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಶಾಲೆಯಿಂದ ಹೊರಹೋದ, ಇತರೆ ಅಂಧಮಕ್ಕಳಿಗೆ ಆರ್ಥಿಕ ನೆರವು, ಔಷಧಗಳನ್ನು ನೀಡುವುದಲ್ಲದೆ ಉದ್ಯ ಮಕ್ಕೆ ಸಾಧ್ಯವಾದಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ.ಶಾಲೆಯ ಹಿರಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಕ್ರೀಡಾತರಬೇತಿ, ದೇಶವಿದೇಶಗಳನ್ನು ನಡೆಯುವ ಕ್ರೀಡೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ದಾನಿಗಳಿಂದ ದಾನವನ್ನು ಪಡೆದು ಬಹಳಷ್ಟು ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲಾಗಿದೆ. ಸಮಾಜ ಸೇವಕರು ನಡೆಸುವ ನಿರ್ಗತಿಕ ಕೇಂದ್ರಗಳಿಗೆ ಸಾಧ್ಯವಾದಷ್ಟು ದಿನಬಳಕೆಯ ವಸ್ತುಗಳನ್ನು ಪೂರೈಸಿದೆ. ದಾನಿಗಳು, ನೌಕರರು ಅವರ ಕುಟುಂಬವರ್ಗದವರಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಆಶಾಕಿರಣ ಅಂಧಮಕ್ಕಳ ಶಾಲೆಯ ಮುಖ್ಯಸ್ಥ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಬೆಂಗಳೂರಿನ ಸದಾಶಿವ ನಗರದಲ್ಲಿ ಮೆಕೋಶ ಸಂಸ್ಥೆಯ ಕಚೇರಿ ಇದೆ. ಸಾರ್ವಜನಿಕರಿಗೆ ಪೌಷ್ಠಿಕಾಂಶ, ಆಹಾರ ಪದ್ಧತಿಉ, ಆರೋಗ್ಯ ಶಿಕ್ಷಣ, ಸಲಹೆ ಮತ್ತು ಮಾರ್ಗದರ್ಶನ, ಭಾವನೆಗಳ ಸಮತೋಲಿತತೆಯ ಬಗ್ಗೆ ನಿರಂತರ ಮಾಹಿತಿ ನೀಡಲಾಗುತ್ತದೆ.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಕ್ಯಾನ್ಸರ್‌ಪೀಡಿತರಿಗೆ ಸಲಹಾ ಕ್ಯಂಪ್‌ಗಳು ಆರೋಗ್ಯ ಶಿಬಿರಗಳು, ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣPದ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಕೆಂಪನಹಳ್ಳಿಯಲ್ಲಿ ೨.೩೦ ಎಕರೆ ಜಾಗದಲ್ಲಿ ೩ ಕೋಟಿ ರೂ. ವೆಚ್ಚದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲಾ ಕಟ್ಟಡ ನಿರ್ಮಿಸಲಾಗಿದೆ. ಈ ಶಾಲೆಯಲ್ಲಿ ೬೨ ವಿದ್ಯಾರ್ಥಿಗಳಿದ್ದಾರೆ. ನಮ್ಮ ಶಾಲೆಯ ವಿದ್ಯಾರ್ಥಿ ರಕ್ಷಿತರಾಜು ಪ್ಯಾರಿಸ್‌ನಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದು, ೧೫೦೦ ಮೀಟರ್ ಓಟಕ್ಕೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.
ಭಾರತದಿಂದ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟುವಾಗಿದ್ದಾರೆಂದರು.ರಾಧಾ, ಆದರ್ಶ, ಶರತ್ ಅವರುಗಳು ಉತ್ತಮ ಕ್ರೀಡಾಪಟುಗಳಾಗಿ ಭಾರತಕ್ಕೆ ಪದಕ ತಂದಿದ್ದಾರೆ. ಇವರುಗಳನ್ನು ಪ್ರಧಾನಿ ತಮ್ಮ ನಿವಾಸದಲ್ಲಿ ಅಭಿನಂದಿಸಿದ್ದಾರೆ. ಇಬ್ಬರಿಗೆ ಕೇಂದ್ರಸರ್ಕಾರದಲ್ಲಿ ನೌಕರಿ ನೀಡಿದ್ದಾರೆಂದರು.
ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕಿ ನಾಗವೇಣಿ ಮಾತನಾಡಿ, ಮುಂದಿನ ದಿನಗಳಲ್ಲಿ ಶಿಕ್ಷಣ ಮತ್ತು ಉದ್ಯೋಗ ಮೇಳ ನಡೆಸಲಾಗುವುದು ಎಂದು ತಿಳಿಸಿದರು. ಡಾ.ಜ್ಯೋತಿಕೃಷ್ಣೇಗೌಡ, ಗೌರಿವರುಣ್ ಇದ್ದರು.
Malenadu Mahotsava Charity Expo-2024