ಪದವಿ ಪಡೆದ ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಕರ್ಷಿತರಾಗಬೇಕು
ಚಿಕ್ಕಮಗಳೂರು: ವಿದ್ಯಾರ್ಥಿನಿಯರು ಪದವಿ ಮುಗಿದ ತಕ್ಷಣ ಮನೆಯಲ್ಲಿ ಕುಳಿತುಕೊಂಡರೆ ಜವಾಬ್ದಾರಿ ಮುಗಿಯುವುದಿಲ್ಲ, ಇಲ್ಲಿಂದ ನಿಮ್ಮ ಹೊಸ ಅಧ್ಯಾಯ ಪ್ರಾರಂಭವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಕರ್ಷಿತರಾಗಬೇಕು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಕರೆ ನೀಡಿದರು.
ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಶ್ರೀ ತರಳಬಾಳು ಜಗದ್ಗುರು ಮಹಿಳಾ ಪ್ರಥಮ ದರ್ಜೆ ಕಾಲೇಜು ಏರ್ಪಡಿಸಿದ್ದ ೨೦೨೩-೨೪ ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ ರೇಂಜರ್‍ಸ್ ಮತ್ತು ವೈ.ಆರ್.ಸಿ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅತಿ ಹೆಚ್ಚು ಅಂಕ ಪಡೆದಾಗ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ಒಳ್ಳೆ ಬಟ್ಟೆ ಹಾಕಿದ ತಕ್ಷಣ ಒಳ್ಳೆಯವರಾಗುವುದಿಲ್ಲ ಒಳ್ಳೆಯ ಮನಸ್ಸು, ಸಂಸ್ಕಾರ ಇದ್ದಾಗ ಮಾತ್ರ ಸುಸಂಸ್ಕೃತ ವ್ಯಕ್ತಿಗಳಾಗಲು ಸಾಧ್ಯ ಎಂದು ಹೇಳಿದರು.
ದ್ರಾಕ್ಷಿ ಹಣ್ಣನ್ನು ಹಿಂಡಿದರೆ ವೈನ್ ಬರುತ್ತದೆ, ಹೂವನ್ನು ಹೊಸಕಿದರೆ ಪರಿಮಳ ಬರುತ್ತದೆ ಹಾಗೆಯೇ ಜೀವನದಲ್ಲಿ ಎಲ್ಲರಿಗೂ ಒತ್ತಡವಿರುತ್ತದೆ, ಅವು ಒಡೆದುಹೋಗದಂತೆ ನೋಡಿಕೊಂಡಾಗ ನಮ್ಮೊಳಗಿರುವ ಸಾಮರ್ಥ್ಯ ಶಕ್ತಿ ಹೊರಬರುತ್ತದೆ. ಯಾವುದೇ ಒಬ್ಬ ಶಿಕ್ಷಕ, ಉಪನ್ಯಾಸಕ ತಾನು ಕಲಿಯದೆ ಇನ್ನೊಬ್ಬರಿಗೆ ಕಲಿಸಲಾರ ಎಂಬ ಮಾತನ್ನು ರವೀಂದ್ರನಾಥ ಟಾಗೋರ್ ಅವರು ಹೇಳಿದ್ದರು ಎಂದು ಹೇಳಿದರು.
ಬೆಂಕಿ ಇಲ್ಲದೆ ದೀಪ ಹೇಗೆ ಉರಿಯುವುದಿಲ್ಲವೋ ಹಾಗೆಯೇ ಮನುಷ್ಯನಿಗೆ ಜೀವನದಲ್ಲಿ ಆಧ್ಯಾತ್ಮವೂ ಅಷ್ಟೇ ಮುಖ್ಯವಾಗಿದ್ದು ಸಮಾಜದಲ್ಲಿ ಆಧ್ಯಾತ್ಮವಿಲ್ಲದೆ ವ್ಯಕ್ತಿ ಬದುಕಲಾರ ಎಂದು ತಿಳಿಸಿದರು.
ನಗರದ ಎಸ್‌ಟಿಜೆ ಮಹಿಳಾ ಪದವಿ ಕಾಲೇಜು ಜಿಲ್ಲೆಯಲ್ಲಿಯೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿನಿಯರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ರೂಪಿಸುವ ಮಹತ್ಕಾರ್ಯದಲ್ಲಿ ತೊಡಗಿದೆ ಎಂದು ತೊಡಗಿದೆ ಎಂದು ಶ್ಲಾಘಿಸಿದರು.
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ನೀಡಿರುವುದರಿಂದ ಕಾಲೇಜಿಗೆ ಬರುವುದಷ್ಟೇ ಅಲ್ಲ. ರಾಜ್ಯದ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಹೋಗಲು ಸಹಕಾರಿಯಾಗಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮಹಿಳೆಗೆ ೨೦೦೦ ರೂಗಳನ್ನು ಸರ್ಕಾರ ನೀಡುತ್ತಿದೆ, ಪ್ರತಿಯೊಬ್ಬರಿಗೂ ದೇವರು ಒಂದು ಅವಕಾಶವನ್ನು ಕೊಟ್ಟಿರುತ್ತಾನೆ ವಿದ್ಯಾರ್ಥಿನಿಯರು ಗುರಿಯಿಟ್ಟು ನಡೆದರೆ ಸಾಧನೆಗೆ ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಟಿಜೆ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೋ. ಜೆ.ಕೆ ಭಾರತಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ವಿನಾಯಕ.ಎಸ್ ಸಿಂದಿಗೆರೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂತೋಷ್‌ಕುಮಾರ್, ಡಾ. ಚಂದ್ರಶೇಖರ್, ಸುರೇಂದ್ರ ನಾಯಕ್, ಚಂದ್ರಶೇಖರ್ ಮತ್ತಿತರರು ಭಾಗವಹಿಸಿದ್ದರು.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜಿ.ವಿ ವಿರೂಪಾಕ್ಷ ಸಮಾರೋಪ ಭಾಷಣ ಮಾಡಿದರು.
Sri Taralbalu Jagadguru Women’s First Class College