ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಇತ್ತೀಚೆಗೆ ನಿರಂತರವಾಗಿ ಸುರಿದ ಭಾರೀ ಮಳೆಗೆ ಹಲವೆಡೆ ಭೂ ಕುಸಿತ ಉಂಟಾಗಿದ್ದು, ಸ್ಥಳ ಪರಿಶೀಲನೆಗಾಗಿ ಕೇಂದ್ರದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡ ಜಿಲ್ಲೆಗೆ ಆಗಮಿಸಿತು.
ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಹಿರಿಯ ಭೂ ವಿಜ್ಞಾನಿ ಸಿಂಥಿಲ್ಕುಮಾರ್ ನೇತೃತ್ವದ ತಂಡ ಮೂರು ದಿನಗಳ ಕಾಲ ಚಿಕ್ಕಮಗಳೂರು, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳಲ್ಲಿ ಭೂ ಕುಸಿತ ಪ್ರದೇಶಕ್ಕೆ ಭೇಟಿ ನೀಡಲು ಉದ್ದೇಶಿಸಿದೆ. ಈ ಬಾರಿ ಮಳೆಯಿಂದಾಗಿ ೧೫ ಕಡೆಗಳಲ್ಲಿ ದೊಡ್ಡಮಟ್ಟದಲ್ಲಿ ಭೂ ಕುಸಿತ ಉಂಟಾಗಿದೆ.
ಈ ಪಟ್ಟಿಯನ್ನು ಭೂ ವಿಜ್ಞಾನಿಗಳಿಗೆ ಜಿಲ್ಲಾಡಳಿತ ಸಲ್ಲಿಸಿದೆ. ಮುಳ್ಳಯ್ಯನಗಿರಿ ಹಾಗೂ ಕವಿಕಲ್ ಗಂಡಿ ಸೇರಿದಂತೆ ಬಾಬಾಬುಡನ್ ಗಿರಿ ರಸ್ತೆಯ ೫ ಕಡೆಗಳಲ್ಲಿ ಪರಿಶೀಲನೆ ನಡೆಸಿತು. ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಿಗೆ ಈ ತಂಡ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಸಿ. ದೀಕ್ಷಿತ್ ಹಾಗೂ ಸಿಬ್ಬಂದಿ ಹಾಜರಿದ್ದರು.
೨೦೧೯ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕಳಸ, ಕೊಪ್ಪ ಸೇರಿದಂತೆ ಹಲವೆಡೆ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಹಲವು ಜನ ಮೃತಪಟ್ಟಿದ್ದರು, ಮನೆ, ತೋಟ, ಜಮೀನುಗಳನ್ನು ಕಳೆದುಕೊಂಡಿದ್ದರು. ಆಗ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದ ಕರ್ನಾಟಕ ವಲಯದ ಹಿರಿಯ ಭೂ ವಿಜ್ಞಾನಿ ರಮೇಶ್ ದಿಕ್ಪಾಲ್ ನೇತೃತ್ವದ ತಂಡ ಸ್ಥಳೀಯ ಗಣಿ ಮತ್ತು ಹಿರಿಯ ಭೂ ವಿಜ್ಞಾನಿಗಳ ತಂಡ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿತ್ತು. ಭೂ ಕುಸಿತಕ್ಕೆ ಕಾರಣದ ಜತೆಗೆ ಎಲ್ಲೆಲ್ಲಿ ಡೇಂಜರ್ ಝೋನ್ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು.
ಆದರೆ, ಈಗ ನೆರೆಯ ಕೇರಳದ ವಯನಾಡಿನಲ್ಲಿ ಭೂ ಕುಸಿತ ಉಂಟಾಗಿ ನೂರಾರು ಜನ ಮೃತಪಟ್ಟ ಹಿನ್ನಲೆಯಲ್ಲಿ ಈ ಬಾರಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ನೀಡುವಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಮೇರೆಗೆ ಚಿಕ್ಕಮಗಳೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ೧೫ ದಿನಗಳಿಂದ ಪರಿಶೀಲನಾ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಭೂ ವಿಜ್ಞಾನಿಗಳು ಳಿಸಿದ್ದು, ಒಂದು ತಂಡ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದೆ ಎಂದು ಹೇಳಿದ್ದಾರೆ.
Survey of landslide areas in the district by Geological Survey of India team