ಚಿಕ್ಕಮಗಳೂರು: ರಕ್ತದಾನ, ವಿದ್ಯಾದಾನ, ನೇತ್ರದಾನ, ಅನ್ನದಾನ ಇವುಗಳಿಗೆ ಹಿಂದೆ ಮಹತ್ವ ಇತ್ತು. ಈಗ ಅಂಗಾಂಗ ದಾನ ಶ್ರೇಷ್ಠವಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಂದು ತೇಗೂರು ಸಮೀಪದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸಹನಾ ಜೆ.ರೂಬಿನ್ ಸಮಾಜ ಸೇವಾ ಟ್ರಸ್ಟ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಅಂಗಾಂಗ ದಾನ ದಿನಾಚರಣೆ-೨೦೨೪ ರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರಸ್ಟ್ನ ಲಾಂಛನ ಬಿಡುಗಡೆ ಮಾಡಿ ಮಾತನಾಡಿದರು.
ಮತ್ತೊಬ್ಬರ ಬಾಳಲ್ಲಿ ಬೆಳಕು ಕಾಣಬೇಕೆಂಬ ದೃಷ್ಟಿಯಿಂದ ನೇತ್ರದಾನವನ್ನು ಪ್ರಾರಂಭ ಮಾಡಲಾಯಿತು. ಸಮಾಜದಲ್ಲಿ ಈಗ ಮೌಢ್ಯತೆಯಿಂದ ಜನರು ಹೊರಬಂದು ಮೃತದೇಹ ಮಣ್ಣು ಅಥವಾ ಬೆಂಕಿಗೆ ಆಹುತಿ ಆಗುತ್ತದೆ ಎಂಬುದನ್ನು ಅರಿತು ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಅಂಗಾಂಗ ಕಸಿ ಮಾಡಿ, ಬೆಂಗಳೂರಿಗೆ ಕಳುಹಿಸಿಕೊಟ್ಟ ಸರ್ಕಾರಿ ಜಿಲ್ಲಾಸ್ಪತ್ರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮೃತ ಸಹನಾ ಸಹನೆ ತುಂಬಿದ ಮಹಿಳೆಯಾಗಿ ಕೋವಿಡ್ ಸಂದರ್ಭದಲ್ಲಿ ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಮಾಜದಲ್ಲಿ ಜನಸೇವೆ ಮಾಡಿದ ಇವರಿಗೆ ಭಗವಂತ ಆಯಸ್ಸು ನೀಡಲಿಲ್ಲ ಎಂದು ವಿಷಾಧಿಸಿದರು.
ಇಂತಹ ಸಮಾಜ ಸೇವಕಿಯ ಹೆಸರಿನಲ್ಲಿ ಟ್ರಸ್ಟ್ ಒಂದನ್ನು ರಚಿಸಿ ಕುಟುಂಬಸ್ತರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಇಂದು ನಾವು ಬದುಕಿದ್ದೇವೆ, ನಿಧನರಾದ ಬಳಿಕ ನಮ್ಮ ದೇಹದ ಅಂಗಾಂಗ ದಾನದಿಂದ ನಾಲ್ಕು ಜನರ ಬದುಕಿಗೆ ಉಪಯೋಗವಾದರೆ ಅದಕ್ಕಿಂತ ಶ್ರೇಷ್ಠವಾದುದು ಇನ್ನಾವುದೂ ಇಲ್ಲ ಎಂದು ತಿಳಿಸಿದರು.
ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಮುಂದೆ ವೈದ್ಯರಾದ ಬಳಿಕ ಅಂಗಾಂಗ ದಾನ ಮಾಡುವಂತೆ ನಾಗರಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ವೈದ್ಯಕೀಯ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಿ ಇವುಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಸಹನಾ ಜೆ.ರೂಬಿನ್ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ರೂಬಿನ್ ಮೊಸಸ್ ವಹಿಸಿದ್ದರು, ತೇಗೂರಿನ ಬಿ.ವೈ. ವಿ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ. ಹರೀಶ್ ಎಂ.ಆರ್, ಜಿಲ್ಲಾ ಸರ್ಜನ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಸಿ.ಮೋಹನ್ ಕುಮಾರ್, ಕೆ.ಪಿ.ಎಂ.ಇ.ಎ ಅಧ್ಯಕ್ಷ ಡಾ. ಡಿ.ಎಲ್ ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Program for World Organ Donation Day-2024