ಚಿಕ್ಕಮಗಳೂರು: ಜೀವನೋಪಾಯಕ್ಕಾಗಿ ಬಡರೈತರು ಮಾಡಿರುವ ಒಂದೆರೆಡು ಎಕರೆ ಒತ್ತುವರಿ ಭೂಮಿಯನ್ನು ತೆರವು ಮಾಡಬಾರದು. ಹಾಗೇನಾದರೂ ಮಾಡಿದಲ್ಲಿ ಅವರಿಗೆ ಪರಿಹಾರ ನೀಡಿ ಜೀವನ ಭದ್ರತೆ ಕಲ್ಪಿಸಬೇಕು ಎಂದು ಆಮ್ಆದ್ಮಿ ಪಕ್ಷ ಆಗ್ರಹಿಸಿದೆ.
ಪಕ್ಷದ ಮಾಧ್ಯಮ ಉಸ್ತುವಾರಿ ಡಾ.ಸುಂದರಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಸರ ಸಂರಕ್ಷಣೆ ಹೆಸರಲ್ಲಿ ಬದುಕಿಗಾಗಿ ಬಡ ರೈತರು ಮಾಡಿಕೊಂಡಿರುವ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಬಡವರನ್ನು ಮತ್ತೆ ಬಡವರನ್ನಾಗಿ ಉಳಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ.ಜಿಲ್ಲೆಯಲ್ಲಿ ರೈತ ಆತ್ಮ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಿಗೇ ಬಡ ರೈತರನ್ನು ಮತ್ತೆ ಬೀದಿಗೆ ತಳ್ಳುವುದು ನ್ಯಾಯೋಚಿತವಲ್ಲ ಎಂದರು.
ಒತ್ತುವರಿ ತೆರವು ನೆಪದಲ್ಲಿ ಅವರು ೩೦-೪೦ ವರ್ಷದಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಡಿಯುತ್ತಿದ್ದಾರೆ. ಮರ ಗಿಡ ಕಡಿಯಲು ಇವರಿಗೆ ಯಾವ ಆದೇಶವಿದೆ ಎಂದು ಪ್ರಶ್ನಿಸಿದರು. ಬಡ ರೈತರ ಒತ್ತವರಿ ತೆರವು ಕಾರ್ಯ ಸ್ಥಗಿತಗೊಳಿಸಬೇಕು. ಜಿಲ್ಲೆಯ ವಿವಿಧ ತಾಲೂಕಿನಲ್ಲಿ ವಿವಿಧ ಸಂಘಟನೆಗಳ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಕೂಡ ಬೆಂಬಲಿಸಲಿದೆ ಎಂದು ಹೇಳಿದರು.
ಬಡ ರೈತರ ಒತ್ತುವರಿ ತೆರವು ಮಾಡಿದಲ್ಲಿ ಅಂತಹ ರೈತರ ಮಕ್ಕಳಿಗೆ ಸರಕಾರ ಉದ್ಯೋಗ ಕಾಯ್ದಿರಿಸಬೇಕು. ಉಚಿತ ಶಿಕ್ಷಣ ನೀಡಬೇಕು.ಪರ್ಯಾಯವಾಗಿ ೫ ಎಕರೆ ಜಮೀನು ನೀಡಬೇಕು. ರೈತರ ಒತ್ತುವರಿ ಜಮೀನಿನಲ್ಲಿ ಬೆಳೆದಿರುವ ಯಾವುದೇ ಮರಗಿಡಗಳನ್ನು ಕಡಿಯಬಾರದು ಎಂದು ಆಗ್ರಹಿಸಿದರು.
ಆಮ್ಆದ್ಮಿ ಜಿಲ್ಲಾಧ್ಯಕ್ಷ ಲಿಂಗಾರಾದ್ಯ, ಮುಖಂಡರಾದ ಈರೇಗೌಡ, ಮೋಹನ್, ವಿಲಿಯಂ ಪೆರೇರಾ, ಪ್ರಕಾಶ್, ಸಲ್ಮಾನ್ ಗೋಷ್ಠಿಯಲ್ಲಿದ್ದರು.
AAP is against the eviction of poor farmers