ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಡದೆ ಅಪಮಾನ ಮಾಡಿದ್ದು ಅಂತಹ ಶಾಲಾ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿ ಸಂಘಟನೆ ಆಗ್ರಹಿಸಿದೆ.
ಸಂಘಟನೆಯ ಗೌರವಾಧ್ಯಕ್ಷ ಹೊನ್ನೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಚೂರಿನಲ್ಲಿ ಮಲ್ಲಿಕಾರ್ಜುನ ಗೌಡ ಎಂಬ ನ್ಯಾಯಾಶರು ೨೦೨೨ ರಲ್ಲಿ ಸ್ವಾತಂತ್ರ್ಯ ದಿನದಂದು ಅಂಬೇಡ್ಕರ್ ಭಾವಚಿತ್ರ ತೆರವು ಮಾಡಿಸಿದ ವಿಚಾರಕ್ಕೆ ರಾಜ್ಯದ್ಯಂತ ತೀವ್ರತರವಾದ ಪ್ರತಿಭಟನೆ ನಡೆದಿತ್ತು. ಅಂದಿನ ಸರಕಾರ ಸ್ವಾತಂತ್ರ್ಯ ದಿನಾಚರಣೆಯಂದು ಮಹಾತ್ಮ ಗಾಂಧೀಜಿ ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಡಬೇಕು ಎಂದು ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.
ಆದರೆ ಈ ಸುತ್ತೋಲೆ ಇದ್ದರೂ ಕೂಡ ನಗರದ ಲಯನ್ಸ್ ಬುದ್ದಿಮಾಂಧ್ಯ ಮಕ್ಕಳ ಶಾಲೆ, ತಾಲೂಕಿನ ಹರಿಹರದಹಳ್ಳಿ ಸರಕಾರಿ ಶಾಲೆ, ಹಿರೇಕೊಳಲೆ ಗ್ರಾ.ಪಂ. ವ್ಯಾಪ್ತಿಯ ಹೊಸಪುರ ಸರಕಾರಿ ಶಾಲೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡದೆ ಬಾಬಾಸಾಹೇಬರಿಗೆ ಅಪಮಾನ ಮಾಡಲಾಗಿದೆ ಎಂದು ದೂರಿದರು.
ವಕೀಲ ಅನಿಲ್ಕುಮಾರ್ ಮಾತನಾಡಿ, ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸಂವಿಧಾನದ ಪೀಠಿಕೆ ಓದಬೇಕು ಎಂದು ಸರಕಾರದ ಸುತ್ತೋಲೆಯಲ್ಲಿದೆ. ಆದರೆ, ಬಹುತೇಕ ಶಾಲೆ, ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುತ್ತಿಲ್ಲ. ನಗರದ ಜ್ಯೂನಿಯರ್ ಕಾಲೇಜಿನಲ್ಲಿಯೇ ಓದುತ್ತಿಲ್ಲ.ಈ ಬಗ್ಗೆ ಡಿಸಿ ಗೆ ಮನವಿ ಸಲ್ಲಿಸಿದ್ದರೂ ಗಮನಹರಿಸಿಲ್ಲ. ನಮ್ಮ ಮನವಿಗೆ ಮನ್ನಣೆ ನೀಡದಿದ್ದಲ್ಲಿ ಚಳವಳಿ ರೂಪಿಸಬೇಕಾಗುತ್ತದೆ ಎಂದರು.
ದಲಿತ ದೌರ್ಜನ್ಯ ಸಮಿತಿ ವಿಭಾಗೀಯ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ, ಅಂಬೇಡ್ಕರ್ ಭಾವಚಿತ್ರ ಇಡದೆ ಅಪಮಾನ ಮಾಡಿರುವ ಶಾಲೆಗಳ ಮುಖ್ಯಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ರಮೇಶ್, ರಾಕೇಶ್, ಸುಜಯ್,ಸುದೀರ್ ಮತ್ತಿತರರಿದ್ದರು.
Demand action against school principals for insulting Ambedkar’s portrait