ಚಿಕ್ಕಮಗಳೂರು: ಬಿಜೆಪಿ-ಜೆಡಿಎಸ್ ನಗರಸಭಾ ಸದಸ್ಯರ ಜೊತೆ ಸಭೆ ನಡೆಸಿ ಚರ್ಚಿಸಿದ್ದು, ಎನ್ಡಿಎ ಮೈತ್ರಿಕೂಟವನ್ನು ನಗರಸಭೆಗೂ ವಿಸ್ತರಿಸುವಂತೆ ತೀರ್ಮಾನ ಕೈಗೊಂಡಿರುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಿಳಿಸಿದರು.
ಅವರು ಎರಡೂ ಪಕ್ಷಗಳ ಮುಖಂಡರು ಹಾಗೂ ನಗರಸಭೆ ಸದಸ್ಯರನ್ನೊಳಗೊಂಡ ಸಭೆಯಲ್ಲಿ ಚರ್ಚಿಸಿದ ಬಳಿಕ ಸಭೆಯಲ್ಲಿ ನಡೆದ ವಿಷಯಗಳ ಚರ್ಚೆ ಕುರಿತು ಮಾಧ್ಯಮಗಳಿಗೆ ಬಿಡುಗಡೆಮಾಡಿ ಮಾತನಾಡಿದರು.
ನಗರಸಭೆಗೂ ಎನ್ಡಿಎ ಮೈತ್ರಿಕೂಟ ವಿಸ್ತರಿಸುವ ತೀರ್ಮಾನದಂತೆ ಮುಂದಿನ ನಗರಸಭೆ ಅವಧಿಯನ್ನು ಮೂರು ಅವಧಿಯಾಗಿ ವಿಂಗಡಿಸಿ ಎರಡು ಅವಧಿಗೆ ಬಿಜೆಪಿ ಒಂದು ಅವಧಿಗೆ, ಜೆಡಿಎಸ್ ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂದರು.
ಹಿಂದಿನ ತಪ್ಪುಗಳು ಮರುಕಳಿಸದಂತೆ ಎರಡೂ ಪಕ್ಷಗಳ ಸದಸ್ಯರುಗಳು ಒಗ್ಗಟ್ಟಿನಿಂದ ಒಳ್ಳೆಯ ಜನಪರ ಆಡಳಿತ ನೀಡಲು ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮುಂದೆ ಯಾರು ನಗರಸಭಾಧ್ಯಕ್ಷರಾಗಬೇಕೆಂಬ ಕುರಿತು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿ ನಿರ್ಣಯಿಸಲಾಗಿದೆ ಎಂದು ಹೇಳಿದರು. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಮುನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿ ನಿರ್ಧಾರ ಪ್ರಕಟಿಸುತ್ತೇವೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ಜೆಡಿಎಸ್-ಬಿಜೆಪಿ ಹೊಂದಾಣಿಕೆ ರಾಜ್ಯ ಮಟ್ಟದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಮಾಡಿದಂತೆ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ನಗರಸಭೆ ಚುನಾವಣೆ ಬಂದಿದೆ ಎಂದರು.
ರಾಜ್ಯಮಟ್ಟದಲ್ಲಿ ನಡೆದಿರುವ ಹೊಂದಾಣಿಕೆ ಆಭಾದಿತ, ಅದನ್ನು ತೋರಿಸಲು ಎರಡೂ ಪಕ್ಷಗಳ ಮುಖಂಡರು ಹಾಗೂ ನಗರಸಭಾ ಸದಸ್ಯರು ಸಭೆಸೇರಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಾವು, ಸಿ.ಟಿ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್ ಶೆಟ್ಟಿ ಈ ಮೂವರಿಗೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಮಾಡಲು ಸೂಚನೆ ಇದ್ದು, ಎಲ್ಲಾ ಸದಸ್ಯರುಗಳು ನಮ್ಮ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರ, ಸ್ಥಾಯಿ ಸಮಿತಿಗೆ ಯಾರನ್ನು ನೇಮಕ ಮಾಡಬೇಕೆಂಬ ಬಗ್ಗೆ ಚುನಾವಣೆ ಮುಂಚೆ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತೇವೆ. ಎಲ್ಲರೂ ನಮ್ಮ ಮೇಲೆ ವಿಶ್ವಾಸವಿಟ್ಟು ತೀರ್ಮಾನಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.
BJP-JDS alliance to power in Municipal Council