ಚಿಕ್ಕಮಗಳೂರು: ಆಧುನಿಕತೆಯ ಅಬ್ಬರದ ನಡುವೆ ಇಂದಿನ ಯುವಪೀಳಿಗೆ ನಮ್ಮ ಸಂಸ್ಕೃತಿ ಸಂಪ್ರದಾಯ ಆಚಾರ ವಿಚಾರ ಹಬ್ಬ ಹರಿದಿನಗಳ ಆಚರಣೆಗಳನ್ನು ಕಡೆಗಣಿಸಬಾರದು ಎಂದು ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಬಿಸಲೇಹಳ್ಳಿ ಸೋಮಶೇಖರ್ ಕಿವಿಮಾತು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಘಟಕ ನಗರದ ಕೋಟೆ ಬಡಾವಣೆಯ ವಿಜಯಲಕ್ಷ್ಮಿ ಅವರ ಮನೆಯಂಗಳದಲ್ಲಿ ಏರ್ಪಡಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಹಬ್ಬ ಹರಿದಿನಗಳಿಗೆ ಜಗತ್ತಿನ ಬಹುತೇಕ ದೇಶಗಳ ಜನತೆ ಆಕರ್ಷಿತರಾಗಿದ್ದಾರೆ. ಆದರೆ, ನಮ್ಮ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಆಚರಣೆಗಳಿಂದ ವಿಮುಖರಾಗುತ್ತಿದ್ದಾರೆ ಎಂದು ವಿಷಾದಿಸಿದರು.
ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯ ಜಗತ್ತಿಗೇ ಮಾದರಿಯಾಗಿವೆ. ನಾವು ಅವುಗಳನ್ನು ಕೈಬಿಟ್ಟರೆ ನಮ್ಮತನವನ್ನೇ ಕಳೆದುಕೊಂಡಂತೆ ಎಂದು ಎಚ್ಚರಿಸಿದ ಅವರು, ಈ ನಿಟ್ಟಿನಲ್ಲಿ ಇಂದಿನ ಪೀಳಿಗೆ ಚಿಂತನೆ ನಡೆಸಬೇಕು. ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟೌನ್ ಮಹಿಳಾ ಸಮಾಜದ ಅಧ್ಯಕ್ಷೆ ಗೀತಾಮೂರ್ತಿ, ನಮ್ಮ ಹಬ್ಬ ಹರಿದಿನಗಳು ಸಂಸ್ಕೃತಿ ಸಂಪ್ರದಾಯಗಳು ಭಾವೈಕ್ಯತೆ ಬೆಳೆಸಲು ಸಹಕಾರಿಯಾಗಿವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ.ಪ. ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಮನೆ ಮನೆಗಳಲ್ಲಿ ಇಡೀ ತಿಂಗಳು ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕ.ಸಾ.ಪ. ಮಹಿಳಾ ಘಟಕದ ಕಾರ್ಯದರ್ಶಿ ರೂಪಾ ನಾಯಕ್ ಮಾತನಾಡಿ, ಶ್ರಾವಣ ಮಾಸದ ಮಹತ್ವ ಮತ್ತು ಅದರ ಆಚರಣೆಗಳನ್ನು ವಿವರಿಸಿ ಶ್ರಾವಣ ಮಾಸ ಅತ್ಯಂತ ಪವಿತ್ರವಾದ ಮಾಸ ಎಂದರು.
ಇಡೀ ವರ್ಷದ ಬಹುತೇಕ ಹಬ್ಬಗಳು ಶ್ರಾವಣ ಮಾಸದಲ್ಲಿ ಬರುವುದರಿಂದಾಗಿ ಶ್ರಾವಣ ಮಾಸವನ್ನು ಮಾಸಗಳ ರಾಜ ಎಂದು ಕರೆಯುತ್ತಾರೆ ಎಂದು ಹೇಳಿದರು.
ಕ.ಸಾ.ಪ. ತಾಲೂಕು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶೈಲಾ ಬಸವರಾಜ್, ಖಜಾಂಚಿ ಮಹಾಲಕ್ಷ್ಮಿ, ನಗರ ಘಟಕದ ಅಧ್ಯಕ್ಷ ಸಚ್ಚಿನ್, ಪದಾಧಿಕಾರಿಗಳಾದ ವೀಣಾ ಮಲ್ಲಿಕಾರ್ಜುನ್, ಓಂಕಾರಪ್ಪ, ಉಪನ್ಯಾಸಕಿ ಆಶಾ ರಾಜು ಉಪಸ್ಥಿತರಿದ್ದರು.
Ignoring the celebration of festivals by the younger generation