ಚಿಕ್ಕಮಗಳೂರು: ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕಳೆ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಅಬ್ಬರದ ಮಳೆಗೆ ಗುಡ್ಡಗಳ ಮೇಲಿಂದ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಭಾರೀ ಗಾತ್ರದ ಕಲ್ಲುಗಳು ಹೆದ್ದಾರಿ ಮೇಲೆ ಉರುಳಿ ಬೀಳುತ್ತಿವೆ. ಪರಿಣಾಮ ಘಾಟಿಯಲ್ಲಿ ಭೂ ಕುಸಿತ ಸಂಭವಿಸುವ ಆತಂಕವೂ ಎದುರಾಗಿದೆ.
ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಘಾಟ್ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರಿಯುತ್ತಿದ್ದು ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ರಸ್ತೆಯುದ್ದಕ್ಕೂ ದಿಢೀರ್ ಝರಿ ಜಲಪಾತಗಳು ಉದ್ಭವಿಸಿವೆ. ಬೆಟ್ಟದ ಮೇಲಿನಿಂದ ಬೀಳುತ್ತಿರುವ ಭಾರೀ ಪ್ರಮಾಣದ ಮಳೆ ನೀರು ಭಯ ಹುಟ್ಟಿಸುತ್ತಿವೆ.
ಗುಡ್ಡದ ಮೇಲಿನಿಂದ ಹರಿದು ಬರುತ್ತಿರುವ ನೀರಿನೊಂದಿಗೆ ಬಂಡೆಕಲ್ಲುಗಳು ಕೊಚ್ಚಿಕೊಂಡು ಬರುತ್ತಿದ್ದು, ಕಲ್ಲುಗಳು ರಸ್ತೆಯ ಅಲ್ಲಲ್ಲಿ ರಾಶಿಬಿದ್ದಿವೆ.
ಭಾರೀ ಮಳೆಯ ನಡುವೆಯೂ ವಾಹನಗಳು ಸಂಚರಿಸುತ್ತಿದ್ದು, ಅವಘಡ ಸಂಭವಿಸುವ ಭೀತಿಯಲ್ಲೇ ಪ್ರಯಾಣಿಕರು ಸಂಚಾರ ಮಾಡುವಂತಾಗಿದೆ.
ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಘಾಟಿಯ ಹೆದ್ದಾರಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ವ್ಯಾಪ್ತಿಯಲ್ಲೂ ಭಾರೀ ಮಳೆ ಸುರಿದಿದ್ದು, ಭಾರೀ ಮಳೆಗೆ ಮುತ್ತೋಡಿ ಭಾಗ ರಸ್ತೆ ಮೇಲೆ ಮಳೆ ನೀರು ಹರಿದು ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.
Landslide at Charmadi Ghat in the district