ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲದರ ಮೇಲೂ ದರ ಏರಿಸಿದ್ದಾಯಿತು. ಇನ್ನು ಗಾಳಿಯ ಮೇಲೂ ಒಂದು ತೆರಿಗೆ ಹಾಕಿಬಿಟ್ಟರೆ ಔರಂಗಜೇಬನ ಅಪ್ಪಂದಿರು ಎನ್ನುವುದನ್ನು ತೋರಿಸಲು ಇನ್ನೇನೂ ಬೇಕಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಟೀಕಿಸಿದರು.
ಬೆಂಗಳೂರು ಜಲ ಮಂಡಳಿ ದರ ಏರಿಕೆ ಮಾಡಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕೆ ಬಂದ ಕೂಡಲೇ ಮದ್ಯದ ಬೆಲೆ ನಂತರ ಸ್ಟಾಂಪ್ ಡ್ಯೂಟಿ, ವಿದ್ಯುತ್ ಬಿಲ್ ಎಲ್ಲಾ ಹೆಚ್ಚಿಸಿದರು. ಈಗ ನೀರಿನ ದರವೂ ಹೆಚ್ಚಿಸಿದ್ದಾರೆ. ಈಗ ಉಳಿದಿರುವುದು ಗಾಳಿಯ ಮೇಲೆ ಟ್ಯಾಕ್ಸ್ ಹಾಕುವುದು ಮಾತ್ರ ಎಂದು ಹೇಳಿದರು.
ಯಾರೇ ಜನವಿರೋಧಿ ಆಡಳಿತ ನಡೆಸಿದರೂ ಆ ಸರ್ಕಾರಕ್ಕೆ ಆಯಸ್ಸು ಕಡಿಮೆ. ಅದನ್ನು ಜನರು ತೀರ್ಮಾನ ಮಾಡಿಬಿಡುತ್ತಾರೆ. ಮುಂದೆ ಬನ್ನಿ ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಜನ ಹೇಳುತ್ತಿದ್ದಾರೆ. ಒಂದು ಕಡೆ ಗ್ಯಾರಂಟಿ ಕೊಟ್ಟು ಮತ್ತೊಂದು ಕಡೆ ಪಿಕ್ ಪ್ಯಾಕೇಟ್ ಮಾಡಲಾಗುತ್ತಿದೆ. ೨೦೦೦ ಕೊಟ್ಟು ೨೦ ಸಾವಿರ ರೂ. ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಸಾಕಷ್ಟು ದಾಖಲೆಗಳಿವೆ. ಅದನ್ನಿಟ್ಟುಕೊಂಡೇ ಸದನದಲ್ಲಿ ಚರ್ಚಿಸಲು ನಾವು ಬಯಸಿದ್ದೆವು. ಇದೆಲ್ಲ ಗೊತ್ತಿದ್ದ ಕಾರಣಕ್ಕೆ ಮುಖ್ಯಮಂತ್ರಿಗಳು ಅದಕ್ಕೆ ಅವಕಾಶ ಕೊಡದೆ ಪಲಾಯನ ಮಾಡಿದರು ಎಂದು ದೂರಿದರು.
ಪ್ರಶ್ನೆ ಮಾಡುವವರಿಗೆ, ಸಮರ್ಥನೆ ಮಾಡಿಕೊಳ್ಳುವವರಿಗೆ ಅದಕ್ಕಿಂತ ದೊಡ್ಡ ವೇದಿಕೆ ಮತ್ತೊಂದಿರಲಿಲ್ಲ. ಎಲ್ಲರು ಮಾತನಾಡಿದ್ದೂ ದಾಖಲೆಗೆ ಹೋಗುತ್ತಿತ್ತು. ಈ ಎಲ್ಲಾ ಸತ್ಯ ಹೊರಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಅದಕ್ಕೆ ಅವಕಾಶವನ್ನೇ ಸಿಎಂ ಕೊಡಲಿಲ್ಲ ಎಂದು ದೂರಿದರು.
ಸಿದ್ದರಾಮಯ್ಯ ತಮ್ಮ ಸಾರ್ವಜನಿಕ ಜೀವನದಲ್ಲಿ ಬ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ ಎನ್ನುತ್ತಾರೆ. ಆದರೆ ಆರ್ಟಿಇ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಎಂ ವಿರುದ್ಧ ೫೦ ಲೋಕಾಯುಕ್ತ ಕೇಸುಗಳು ಇರುವುದಾಗಿ ಉತ್ತರ ಸಿಕ್ಕಿದೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಯಾವಾಗಬೇಕಾದರೂ ಬಂಧಿಸಬಹುದು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆ ರೀತಿ ಮಾಡಲು ಅದು ಪುಕಸಟ್ಟೆ ಪುನುಗಲ್ಲ. ಕುಮಾರಸ್ವಾಮಿ ಅವರು ತಾವೆಂದಿಗೂ ಸಂವಿದಾನಕ್ಕಿಂತ ಮಿಗಿಲು ಎಂದು ಹೇಳಿಕೊಂಡಿಲ್ಲ. ೨೦೧೭ ರಿಂದ ೧೮ ವರೆಗೆ ಕಾಂಗ್ರೆಸಿಗರೇ ಅಧಿಕಾರದಲ್ಲಿದ್ದರು. ಆಗ ಸುಮ್ಮನಿದ್ದರು.
೨೦೧೯ ರಲ್ಲಿ ಅವರ ಬೆಂಬಲದಿಂದಲೇ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಸುಮ್ಮನಿದ್ದರು. ಆಗ ಕುಮಾರಸ್ವಾಮಿ ಬಹಳ ಒಳ್ಳೆವರಾಗಿದ್ದರು. ಡಿ.ಕೆ.ಶಿವಕುಮಾರ್ ಅವರು ಅಣ್ತಮ್ಮ, ಜೋಡೆತ್ತು ಎನ್ನುತ್ತಿದ್ದರು. ಈಗ ಕುಮಾರ ಸ್ವಾಮಿ ಬಿಜೆಪಿ ಜೊತೆ ಬಂದ ಕೂಡಲೇ ಖಳನಾಯಕನಾಗಿದ್ದಾರೆ. ಈಗ ಅವರು ನಡೆದುಕೊಳ್ಳುತ್ತಿರುವುದು ರಾಜಕೀಯ ದುರುದ್ದೇಶ ಎನ್ನುವುದು ಎಂತಹವರಿಗೂ ಗೊತ್ತಾಗುತ್ತದೆ ಎಂದರು.
The state Congress government is an anti-people government