ಚಿಕ್ಕಮಗಳೂರು: ಮಾಜಿ ಸಚಿವ ದಿವಂಗತ ಡಿ.ಬಿ ಚಂದ್ರೇಗೌಡ ಅವರ ಹೆಸರು ಚಿರಸ್ತಾಯಿಯಾಗಿ ಉಳಿಯಬೇಕೆಂಬ ಉದ್ದೇಶದಿಂದ ಸಮಾಜದಲ್ಲಿ ನೊಂದವರಿಗೆ ಅಳಿಲುಸೇವೆ ಸಲ್ಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ತಿಳಿಸಿದರು.
ತಮ್ಮ ರಾಜಕೀಯ ಜೀವನದಲ್ಲಿ ಬಡವರು ಮತ್ತು ದೀನ ದಲಿತರ ಪರವಾಗಿ ಧ್ವನಿಯಾಗಿದ್ದ ಚಂದ್ರೇಗೌಡರು ಸ್ವಚ್ಚ ಸ್ವಾಭಿಮಾನಿಯಾಗಿದ್ದರು ಎಂದು ಬಣ್ಣಿಸಿದರು.
ಅವರು ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಹಾಗೂ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಮಾಜಿ ಸಚಿವ ದಿ. ಡಿ.ಬಿ ಚಂದ್ರೇಗೌಡ ಅವರ ೮೮ ನೇ ಹುಟ್ಟುಹಬ್ಬದ ಅಂಗವಾಗಿ ದೇಣಿಗೆಯನ್ನು ನೀಡಿ ಮಧ್ಯಾಹ್ನದ ಅನ್ನದಾಸೋಹ ಏರ್ಪಡಿಸಿ ಮಾತನಾಡಿದರು.
ಅಂಧಮಕ್ಕಳ ಪಾಠಶಾಲೆಯ ಕಾರ್ಯದರ್ಶಿ ಮಹೇಶ್ ಮಾತನಾಡಿ, ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕಿಯೂ ಇಲ್ಲದಂತೆ ಸೇವೆ ಸಲ್ಲಿಸಿದ ಡಿ.ಬಿ ಚಂದ್ರೇಗೌಡರು ಮಹಾನ್ ವ್ಯಕ್ತಿಯಾಗಿದ್ದಾರೆಂದು ಹೇಳಿದರು.
೧೯೭೭-೭೮ ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರಿಗೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ಮೂಲಕ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದರು. ಇಂದಿರಾಗಾಂಧಿಯವರು ಗೆದ್ದುಹೋದ ನಂತರ ಪ್ರಧಾನಮಂತ್ರಿಯಾದರು ಎಂದರು.
ಡಿ.ಬಿ ಚಂದ್ರೇಗೌಡರು ಯಾವುದೇ ಪಕ್ಷಕ್ಕೆ ಹೋದರೂ ಸತ್ಯ, ನಿಷ್ಠೆಯಿಂದ ನಡೆದುಕೊಂಡು ಬಂದ ಸ್ವಚ್ಚ ರಾಜಕಾರಣಿಯಾಗಿದ್ದರು. ಅವರು ಸಚಿವರಾಗಿದ್ದಾಗ ಸನ್ಮಾನ ನೀಡಿದ ಸಂದರ್ಭದಲ್ಲಿ ಕೊಟ್ಟ ಹಣವನ್ನು ಆಶಾಕಿರಣ ಅಂಧಮಕ್ಕಳ ಶಾಲೆಗೆ ದೇಣಿಗೆ ನೀಡಿ ಉದಾರ ವ್ಯಕ್ತಿಯಾಗಿದ್ದರು ಎಂದು ಬಣ್ಣಿಸಿದರು.
ರೋಟರಿ ಸಂಸ್ಥೆ ಶ್ರೀಕಾಂತ್ ಮಾತನಾಡಿ, ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಆಶಾಕಿರಣ ಅಂಧಮಕ್ಕಳ ಪಾಠಶಾಲೆಗೆ ರೋಟರಿ ಸಂಸ್ಥೆ ಸೇರಿದಂತೆ ಹಲವು ದಾನಿಗಳು ದೇಣಿಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಆಶಾಕಿರಣ ಶಾಲೆಯ ಉಪಾಧ್ಯಕ್ಷರಾದ ಮೋಹನ್, ಡಿ.ಬಿ ಚಂದ್ರೇಗೌಡರ ಕುಟುಂಬ ವರ್ಗದರಾದ ಸುಮಲತಾ, ವಿಜಯ್ಕುಮಾರ್, ಪವಿತ್ರ, ವಕೀಲರಾದ ವೀಣಾ ಹಾಗೂ ಸಹೋದರರ ಮಕ್ಕಳು ಹಾಜರಿದ್ದು, ವೃದ್ಧಾಶ್ರಮದಲ್ಲಿ ವಾಸವಿರುವ ವೃದ್ಧರಿಂದ ಆಶೀರ್ವಾದ ಪಡೆದರು.
DB Chandra Gowda was a pure politician