ಮೂಡಿಗೆರೆ: ಬಾರಿ ಕುತೂಹಲ ಮೂಡಿಸಿದ್ದ ಮೂಡಿಗೆರೆ ಪಟ್ಟಣ ಪಂಚಾಯಿತಿ ೨ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದು, ಶಾಸಕಿ ನಯನಾ ಮೋಟಮ್ಮ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿ ಪ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಂಡಿದೆ. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ರಾಜಶೇಖರ್ಮೂರ್ತಿ ಕರ್ತವ್ಯ ನಿರ್ವಹಿಸಿದರು.
ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿಯಲು ೧೧ ಸದಸ್ಯರ ಪೈಕಿ ೬ ಬಿಜೆಪಿ ಸದಸ್ಯರಿದ್ದು, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇರಿ ೭ ಮತವಿತ್ತು. ಕಾಂಗ್ರೆಸ್ ೪ ಸದಸ್ಯರಿದ್ದು, ಶಾಸಕಿ ನಯನಾ ಮೋಟಮ್ಮ ಸೇರಿ ೫ ಮತವಿತ್ತು. ೧ ಜೆಡಿಎಸ್ ಮತವಿತ್ತು. ಬಿಜೆಪಿ ಜತೆ ಜೆಡಿಎಸ್ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಮತ್ತೊಂದು ಮತ ಸೇರ್ಪಡೆಗೊಂಡಿದ್ದು, ಬಿಜೆಪಿ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತವಿತ್ತು.
ಮೂಡಿಗೆರೆ ಪ.ಪಂ. ೨ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸೀ ಮೀಸಲಾತಿ ಘೋಷಣೆಯಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಯಿಂದ ಕಾಂಗ್ರೆಸ್ನ ಸದಸ್ಯ ಎಚ್.ಪಿ.ರಮೇಶ್ ಒಬ್ಬರೇ ಇದ್ದರು. ಹಾಗಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ಗೆ ಮೀಸಲಾಗಿತ್ತು. ಇನ್ನು ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು.
ಬಿಜೆಪಿಗೆ ಸ್ಪಷ್ಟ ಬಹುಮತವಿದ್ದರೂ ಕಾಂಗ್ರೆಸ್ ಕೇವಲ ೪ ಸದಸ್ಯರನ್ನಿಟ್ಟುಕೊಂಡು ರಾಜಕೀಯ ತಂತ್ರಗಾರಿಕೆ ನಡೆಸುವ ಮೂಲಕ ಬಿಜೆಪಿಗೆ ದಕ್ಕುವ ಅಧಿಕಾರವನ್ನು ಕಿತ್ತುಕೊಂಡು ಪ.ಪಂ. ಅಧಿಕಾರವನ್ನು ಕಾಂಗ್ರೆಸ್ ಪಡೆದುಕೊಳ್ಳುವಲ್ಲಿ ಯಶಸ್ವಿ ಕಂಡಿದೆ. ವಿಧಾನ ಪರಿ?ತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರಸಭೆಗೆ ಮತ ಚಲಾಯಿಸುವ ಕಾರಣ ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ಅವರ ಮತವಿರಲಿಲ್ಲ.
ಪ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಬಳಿಕ ಪ.ಪಂ. ಅಧಿಕಾರ ಗಿಟ್ಟಿಸಿಕೊಳ್ಳಬೇಕೆಂದು ಶಾಸಕಿ ನಯನಾ ಮೋಟಮ್ಮ ಅವರು ಪ.ಪಂ. ಹಿರಿಯ ಸದಸ್ಯರೊಂದಿಗೆ ಗುಪ್ತವಾಗಿ ಕಾರ್ಯತಂತ್ರ ರೂಪಿಸಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ ಮೈತ್ರಿಕೂಟದಲ್ಲಿದ್ದ ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಕುಮಾರ್ ಅವರನ್ನು ಮನವೊಲಿಸಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾದರು. ನಂತರ ಎಲ್ಲಾ ೫ ಮಂದಿ ಕಾಂಗ್ರೆಸ್ ಸದಸ್ಯರನ್ನು ಪ್ರವಾಸಕ್ಕೆ ಕಳುಹಿಸಲಾಯಿತು.
ಈ ನಡುವೆ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಪ.ಪಂ. ಸದಸ್ಯ ಧರ್ಮಪಾಲ್ ಅವರು ಕೆಲ ಕಾರಣದಿಂದ ಬಿಜೆಪಿಯಿಂದ ಅಂತರ ಕಾದುಕೊಂಡಿದ್ದರು. ಅವರನ್ನು ಕೂಡ ಕಾಂಗ್ರೆಸ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಹಿನ್ನಲೆಯಲ್ಲಿ ಬಿಜೆಪಿ ಪಕ್ಷ ಪ.ಪಂ.ಯ ೬ ಮಂದಿ ಸದಸ್ಯರಿಗೆ ಕಳೆದ ೨ ದಿನದ ಹಿಂದೆ ವಿಪ್ ಜಾರಿಗೊಳಿಸಿತು. ಅಲ್ಲದೇ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲವೆಂದು ಹೇಳಲಾಗುತ್ತಿದೆ. ಇದರಿಂದ ಕಾಂಗ್ರೆಸ್ ೭ ಮತಗಳ ಬಲದೊಂದಿಗೆ ಪಪಂನಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ನಂತರ ನಡೆದ ಅಭಿನಂದನೆ ಸಭೆಯಲ್ಲಿ ಶಾಸಕಿ ನಯನಾ ಮೋಟಮ್ಮ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಘೋಷಣೆ ಬಳಿಕ ಪ.ಪಂ. ಅಧಿಕಾರ ಹಿಡಿಯಲೇಬೇಕೆಂದು ಪ.ಪಂ. ಹಿರಿಯ ಪ.ಪಂ. ಸದಸ್ಯರೊಂದಿಗೆ ಗುಪ್ತ ಕಾರ್ಯತಂತ್ರ ರೂಪಿಸುವ ಅನಿವಾರ್ಯತೆ ಇತ್ತು. ಹಾಗಾಗಿ ಈ ಬಗ್ಗೆ ಪಕ್ಷದ ಯಾವ ಮುಖಂಡರ ಗಮನಕ್ಕೆ ತರದೇ, ಚರ್ಚೆ ಕೂಡ ನಡೆಸಲಿಲ್ಲ. ತಾನು ಮಾಡಿದ ಕಾರ್ಯದ ಬಗ್ಗೆ ಯಾರೂ ತಪ್ಪು ತಿಳಿಯಬಾರದು. ತನ್ನ ಕ್ಷೇತ್ರಕ್ಕೆ ಪ.ಪಂ. ಒಂದು ಪ್ರತಿಬಿಂಬಿಸುವ ಪಂಚಾಯಿತಿ ಆಗಿದೆ. ಹಾಗಾಗಿ ಅಧಿಕಾರ ಹಿಡಿಯಲು ಗುಪ್ತ ಕಾರ್ಯಚರಣೆ ನಡೆಸಬೇಕಾಯಿತು. ಇನ್ನು ಮುಂದೆ ಪಟ್ಟಣದ ಎಲ್ಲಾ ಸಮಸ್ಯೆ ಬಗೆಹರಿಸಲು ಸಂಪೂರ್ಣ ಸಹಕಾರ ನೀಡುತ್ತೇನೆಂದು ಹೇಳಿದರು.
ನೂತನ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್ ಮಾತನಾಡಿ, ಇಂತಹದೊಂದು ಸಂದರ್ಭ ಬರುತ್ತದೆ ಎಂದು ಹೂಹೆ ಕೂಡ ಮಾಡಿರಲಿಲ್ಲ. ತನ್ನ ಅವದಿಯಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಪಟ್ಟಣವನ್ನು ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ, ಪ.ಪಂ. ಸದಸ್ಯರಾದ ಕೆ.ವೆಂಕಟೇಶ್, ಹಂಝಾ, ಕುರ್ಷಿದ್ಬಾನು, ಧರ್ಮಪಾಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.
BJP has a clear majority in Mudigere Town Panchayat but failed to get power