ಚಿಕ್ಕಮಗಳೂರು: ಸಮಾಜದ ಎಲ್ಲಾ ವರ್ಗದ ಜನರಿಗೆ ಕಾಯಕದ ಮೂಲಕ ತಮ್ಮ ಕುಲ ಕಸುಬುಗಳಿಗೆ ಮಹತ್ವ ನೀಡಿದ ಹಿನ್ನೆಲೆಯಲ್ಲಿ ಕಾಯಕಕ್ಕೆ ಒಂದು ಮೌಲ್ಯವನ್ನು ತಂದುಕೊಟ್ಟವರು ಬಸವಾದಿ ಶರಣರು ಎಂದು ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯಿಸಿದರು.
ಅವರು ಇಂದು ನಗರದ ಕೋಟೆ ಬಡಾವಣೆಯ ಚನ್ನಾಪುರ ರಸ್ತೆಯಲ್ಲಿರುವ ಬಸವ ಬೆಳಕು ಮನೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ಸಿಪಿಐ ಕಾರ್ಯದರ್ಶಿ ಎಸ್.ಎಲ್ ರಾಧ ಸುಂದರೇಶ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹೆಣ್ಣಿಗೆ ದೈವಿಕ ಸ್ಥಾನವನ್ನು ಕಲ್ಪಿಸಿಕೊಟ್ಟವರು ಶರಣರು. ಮಹಿಳೆ ಮನಸ್ಸು ಮಾಡಿದರೆ ಏನುಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಎಸ್.ಎಲ್ ರಾಧ ಸುಂದರೇಶ್ ರವರು ಮಾದರಿಯಾಗಿದ್ದಾರೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಣಿಯವರ ಆಭರಣಗಳನ್ನು ಗಿರವಿ ಇಟ್ಟು ಕನ್ನಂಬಾಡಿ ಕಟ್ಟಿಸಿದರು. ಕಸಾಪ ಸಂಸ್ಥಾಪಕ ರಾಜೇಂದ್ರ ಸ್ವಾಮಿಗಳು ಬಂಗಾರದ ಕರಡಿಗೆಯನ್ನು ಮಾರಾಟ ಮಾಡಿ ಬಡ ಮಕ್ಕಳಿಗೆ, ಅನಾಥ ಮಕ್ಕಳಿಗೆ ಶಿಕ್ಷಣ, ವಸತಿ ಕೊಟ್ಟು ನೆಲೆ ನಿಲ್ಲಬೇಕೆಂಬ ಜೀವನವನ್ನು ಕಲಿಸಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಕಾಯಕದಲ್ಲಿ ನುಲಿಯ ಚಂದಯ್ಯ ಕನ್ನಡವನ್ನು ದೇವರಿಗೆ ಕಲಿಸಿದವರು ಬಸವಣ್ಣ, ಸಾಮಾನ್ಯ ಜನರಿಗೆ ಅರ್ಥ ಆಗುವ ಹಾಗೆ ವಚನಗಳನ್ನು ಕನ್ನಡದಲ್ಲೇ ರಚಿಸಿದವರು ವಿಶ್ವಗುರು ಬಸವಣ್ಣ ಎಂದು ಬಣ್ಣಿಸಿದರು.
ಎರಡು ಕೈಗಳಿಂದ ದುಡಿದು, ಒಂದು ಕೈಯಲ್ಲಿ ತಾವು ತಿಂದು, ಎರಡು ಕೈಯಲ್ಲಿ ಇನ್ನೊಬ್ಬರಿಗೆ ಕೊಡುವುದು ನಿಜವಾದ ಫಲ. ಇದು ಶ್ರಮಿಕರಿಗೆ ಸಲ್ಲಬೇಕು. ಪ್ರತಿಯೊಬ್ಬರೂ ದುಡಿಮೆಯಲ್ಲಿ ದೇವರ ಕಾಣಬೇಕು ಎಂದು ಕರೆನೀಡಿದರು.
ನಿಸ್ವಾರ್ಥ ಸೇವೆ ಸಲ್ಲಿಸಿದ ದಿ. ಬಿ.ಕೆ ಸುಂದರೇಶ್ರವರ ಹೋರಾಟವನ್ನು ಸ್ಮರಿಸಿದ ಅವರು ಎಲ್ಲರೂ ಅವರಂತೆ ಸೇವೆ ಸಲ್ಲಿಸಬೇಕಾಗಿರುವುದು ಅಗತ್ಯ. ಜಿಲ್ಲೆಯ ಸಹಕಾರಿ ಸಂಸ್ಥೆ, ಖಾಸಗಿ ಸಹಭಾಗಿತ್ವದಲ್ಲಿ ನಡೆಸಿದ ಕೊಪ್ಪದ ಟಿ.ಸಿ.ಎಸ್ ಸಾರಿಗೆ ಸಂಸ್ಥೆಗೆ ವಿದೇಶದಿಂದ ಬಂದು ಭೇಟಿಯಾಗುತ್ತಿರುವ ಬಗ್ಗೆ ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧ ಸುಂದರೇಶ್ ಅವರು ಸಮಾಜದ ಋಣ ತೀರಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಸನ್ಮಾನಕ್ಕಾಗಿ ಕಾರ್ಯಕ್ರಮಗಳಾಗದೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದಾಗಬೇಕು. ನನಗೆ ಆತ್ಮೀಯವಾಗಿ ಹೃದಯಪೂರ್ವಕವಾಗಿ ಸನ್ಮಾನ ನೀಡಿದ ಎಲ್ಲರಿಗೂ ಋಣಿಯಾಗಿರುತ್ತೇನೆ ಎಂದು ಹೇಳಿದರು.
ಸಮಾಜದಲ್ಲಿ ಗೌರವ ನೀಡುವುದು ಒಡವೆಯಲ್ಲ, ಬದಲಾಗಿ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತದೆ. ಶರಣ ಸಾಹಿತ್ಯ ಪರಿಷತ್ ಬಳಗದೊಂದಿಗೆ ಸೇರಿ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸ ಮಾಡಲು ಸ್ಪೂರ್ತಿಯಾಗಿದೆ ಎಂದರು.
ಸಾಹಿತಿ ರವೀಶ್ ಬಸಪ್ಪ ಮಾತನಾಡಿ, ದಲಿತರು, ಮಹಿಳೆಯರು, ಶೋಷಿತರ ಪರವಾಗಿ ಸಮಾನತೆ ಕುರಿತು ಜನರ ಕಷ್ಟಗಳ ಬಗ್ಗೆ ಅರಿತು ಬದುಕನ್ನಾಗಿಸಿಕೊಂಡವರು ಎಸ್.ಎಲ್ ರಾಧ ಸುಂದರೇಶ್ ಎಂದು ಹೇಳಿದರು.
ಶರಣ ಸಾಹಿತ್ಯ ಪರಿಷತ್ ಸಂಸ್ಥಾಪಕ ಪೂಜ್ಯ ರಾಜೇಂದ್ರ ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕಾಗಿದೆ. ಪ್ರಸ್ತುತ ಭಾರತ ಸಂಕೋಲೆ, ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅಸಮಾನತೆ ಹೊಸ ರೂಪ ಪಡೆದಿದೆ. ಸಮ ಸಮಾಜ ನಿರ್ಮಾಣ ಮಾಡುವುದು ಶರಣ ಸಾಹಿತ್ಯದ ಉದ್ದೇಶ ಎಂದರು.
ಮನುಷ್ಯ ಸಮಾಜವನ್ನು ಒಲವಿನ ಸಮಾಜವನ್ನಾಗಿ ಕಟ್ಟಿದವರು ಶರಣರು. ಇತ್ತೀಚೆಗೆ ದೊಡ್ಡ ಕಾರ್ಯಕ್ರಮಗಳು ಅರ್ಥಪೂರ್ಣವಾಗದೇ ತೋರ್ಪಡಿಕೆಗಾಗಿ ನಡೆಯುತ್ತಿವೆ ಎಂದು ವಿಷಾಧಿಸಿದ ಅವರು ಆತ್ಮ ಸಂತೋಷಕ್ಕಾಗಿ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ, ಈ ನಿಟ್ಟಿನಲ್ಲಿ ಇಂದು ನಿಜವಾದ ಶರಣ ಸಾಹಿತ್ಯದ ಜೊತೆಗೆ ಹೆಜ್ಜೆ ಹಾಕಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ್, ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಪ್ರಭು, ಓಂಕಾರಪ್ಪ, ಲಕ್ಷ್ಮಣ, ಚಂದ್ರಣ್ಣ, ಮಂಜಣ್ಣ, ನಟರಾಜ್, ನಿಜಗುಣ, ಕಾಂತ, ಸಂತೋಷ್ ಮುಂತಾದವರು ರಾಧ ಸುಂದರೇಶ್ ಅವರ ಅನೇಕ ಒಡನಾಡಿಗಳು ಭಾಗವಹಿಸಿದ್ದರು.
Honor program organized by Zilla Sharan Sahitya Parishad