ಚಿಕ್ಕಮಗಳೂರು: ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾಸಕ್ತಿ ಇರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಇವರ ಸಹಯೋಗದಲ್ಲಿ ಡಿ.ಎ.ಸಿ.ಜಿ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬ ಮಾತಿನಂತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯವಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲುವಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.
ಇಂದು ಆಗಸ್ಟ್ ೨೯ ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ ರಾಷ್ಟ್ರ ಕಂಡ ಸರ್ವಶ್ರೇಷ್ಠ ಕ್ರೀಡಾ ಪಟುಗಳಲ್ಲಿ ಒಬ್ಬರಾದ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದ ಅವರು ಈ ಮೂಲಕ ದಿಗ್ಗಜ ಕ್ರೀಡಾಪಟುವಿನ ನೆನಪಿನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಾಗುತ್ತದೆ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಮೂರ್ತಿ ಮಾತನಾಡಿ ರಾಷ್ಟ್ರೀಯ ಕ್ರೀಡಾ ದಿನ ಆಚರಣೆಯ ಮುಖ್ಯ ಉದ್ದೇಶ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವುದು. ಜೊತೆಗೆ ದೈನಂದಿನ ಜೀವನದಲ್ಲಿ ದೈಹಿಕವಾಗಿ ಸಕ್ರೀಯವಾಗಿರುವಂತೆ ಪ್ರೇರೇಪಿಸುವುದಾಗಿದೆ ಎಂದು ಹೇಳಿದರು.
ಇಂದು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳ ಬದಲು ಮೊಬೈಲ್ ಬಳಕೆಯಲ್ಲಿ ಹೆಚ್ಚು ತಲ್ಲೀನರಾಗಿರುತ್ತಾರೆ. ಇದರಿಂದ ಮಾನಸಿಕ ಖಿನ್ನತೆ ದೈಹಿಕ ದೌರ್ಬಲ್ಯಗೊಂಡು ತಮ್ಮ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕ್ರೀಡೆ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ಸಾಹದಿಂದಿರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ಡಿ.ಎ.ಸಿ.ಜಿ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಶಾಮ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಿಬ್ಬಂದಿ, ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
National Sports Day was celebrated in memory of hockey legend Dhyan Chand