ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ನಿರ್ಣಾಯಕ ಪಾತ್ರ
ಚಿಕ್ಕಮಗಳೂರು: ಸಮಾಜದ ಎಲ್ಲರೂ ಉತ್ತಮವಾದ ಬದುಕು ಕಟ್ಟಿಕೊಂಡಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇಗೌಡ ಅಭಿಪ್ರಾಯಿಸಿದರು.
ಅವರು ಇಂದು ಅಜಾದ್‌ಪಾರ್ಕ್‌ನಲ್ಲಿರುವ ಗುರುಭವನದಲ್ಲಿ ಕೆ.ಆರ್.ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕ.ರಾ.ಪ್ರಾ.ಶಾ.ಶಿಕ್ಷಕರ ಸಂಘ ತಾಲ್ಲೂಕು ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕಿನ ಸಮಸ್ತ ಸರ್ಕಾರಿ, ಅನುಧಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಉದ್ಯೋಗದಲ್ಲಿರುವ ಪ್ರತಿಯೊಬ್ಬರೂ ಅವರವರ ಕ್ಷೇತ್ರದಲ್ಲಿ ಒತ್ತಡದ ಬದುಕು ಸಾಗಿಸುವಂತಾಗಿದೆ.ಅದಕ್ಕಾಗಿ ಎಲ್ಲರು ಹೊಂದಾಣಿಕೆಯಿಂದ ಸೇವೆಸಲ್ಲಿಸಿದಾಗ ಆರೋಗ್ಯ ಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಶಿಕ್ಷಕರ ಕ್ಷೇತ್ರ ಬಹಾಳ ಪ್ರಮುಖ ಪವಿತ್ರವಾದ ಕ್ಷೇತ್ರವಾಗಿದ್ದು, ಸಮಾಜದಲ್ಲಿ ಯುವ ಪೀಳಿಗೆಯನ್ನು ಮುಖ್ಯವಾಹಿನಿಗೆ ತರುವ ಜೊತೆಗೆ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಶಿಕ್ಷಣ ತಜ್ಞ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ಡಾ. ರಾಧಾಕೃಷ್ಣ ಅವರ ಜಯಂತಿಯನ್ನು ಶಿಕ್ಷಕ ದಿನಾಚರಣೆಯಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದ ಅವರು, ಇಂದು ಒತ್ತಡದ ಬದುಕಿನಿಂದಾಗಿ ಸಮಾಜದಲ್ಲಿ ಅನೇಕ ಅಹಿತಕರ ಘಟನೆಗಳು ನಡೆಯಲು ಪ್ರಮುಖ ಕಾರಣವಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಸಂವಿಧಾನದ ಆಶಯದಂತೆ ಸಮಾಜದ ಪ್ರತಿಯೊಬ್ಬ ನಾಗರೀಕನಿಗೂ ಆರ್.ಟಿ.ಐ ಬಗ್ಗೆ ತಿಳಿದಿರಬೇಕು ಜೊತೆಗೆ ತಲುಪಬೇಕು ಎಂಬುದು ಉದ್ದೇಶವಾಗಿದೆ. ಇದನ್ನು ಬ್ಲಾಕ್‌ಮೇಲ್‌ಗೆ ಬಳಕೆ ಮಾಡಿಕೊಳ್ಳತ್ತಿರುವುದು ದುರ್ದೈವದ ಸಂಗತಿ ಎಂದು ಹೇಳಿದರು.
ಇಂತಹ ಕಲುಷಿತ ವಾತಾವರಣಾ ನಿರ್ಮಾಣ ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳ ವಿರುದ್ದ ಶಿಕ್ಷಕರು ಜಾಗರೂಕರಾಗಬೇಕು ಒತ್ತಡದ ಬದುಕು ನಿವಾರಣೆ ಆಗಿ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕೆಂದು ಕರೆ ನೀಡಿದರು.
ಪ್ರತಿಯೊಬ್ಬ ವ್ಯಕ್ತಿ ಪ್ರಾಥಮಿಕ ಶಿಕ್ಷಣ ನೀಡಿದ ಶಿಕ್ಷಕರನ್ನು ಅವರ ಜೀವನದ ಕೊನೆಯವರೆಗೆ ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಆದರೆ, ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ಉಪನ್ಯಾಸಕರನ್ನು ನೆನಪು ಮಾಡಿಕೊಳ್ಳುವುದಿಲ್ಲ ಸಮಾಜದ ಮುಖ್ಯ ವಾಹಿನಿಯಲ್ಲಿ ಮಹತ್ತರ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ಜಾಗರೂಕರಾಗಿ ವೃತ್ತಿಜೀವನ ನಡೆಸಬೇಕೆಂದು ತಿಳಿಸಿದರು.
ಶಿಕ್ಷಕರು ಒತ್ತಡದ ಕಾರ್ಯಕ್ಷೇತ್ರದ ನಡುವೆ ಆರೋಗ್ಯಕ್ಕೆ ಆಸಕ್ತಿ ವಹಿಸಲಾಗದು. ಈ ನಿಟ್ಟಿನಲ್ಲಿ ಕೆ.ಆರ್.ಎಸ್ ಆಸ್ಪತ್ರೆ ಮೂಲಕ ಆಯೋಜಿಸುತ್ತಿರುವ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹಕಾರಿಯಾಗಿದೆ. ಇದು ನಿತ್ಯ-ನಿರಂತರವಾಗಬೇಕೆಂದು ಹೇಳಿದರು.
ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಿಕ್ಷಕರ ದಿನಾಚಾರಣೆಯ ಅಂಗವಾಗಿ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದರು.
ಕೆಆರ್‌ಎಸ್ ಆಸ್ಪತ್ರೆ ಮುಖ್ಯ ವೈದ್ಯ ಡಾ.ಯೋಗೀಶ್ ಮಾತನಾಡಿ ಜ್ಯೋತಿ ಸಂಜೀವಿನಿ ವಿಷಯದಲ್ಲಿ ಸಮಸ್ಯೆ ಎದುರಾದಾಗ ಎಸ್.ಎಲ್ ಬೋಜೇಗೌಡರು ಸಹಾಯ ಮಾಡಿದ ಬಗ್ಗೆ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ಮಕ್ಕಳನ್ನು ಮುಂದಿನ ಉತ್ತಮಪ್ರಜೆಗಳಾಗಿ ರೂಪಿಸುವ ಸರ್ಕಾರಿ ಅನುದಾನಿತ ಶಾಲಾಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.
ಖಾಸಗಿ ಶಿಕ್ಷಣಸಂಸ್ಥೆ ಖಾಸಗಿ ಆಸ್ಪತ್ರೆಗಳಲ್ಲಿ ವಿಶೇಷವಾದ ಕಾಳಜಿ ವಹಿಸುತ್ತಾರೆ ಎಂಬುದನ್ನು ಬಿಟ್ಟರೆ ಬೇರೆ ಬೇರೆ ಚಿಕಿತ್ಸೆ ವಿಧಾನಗಳ ಬಗ್ಗೆ ತಿಳಿಸುವುದಿಲ್ಲ ಸರ್ಕಾರಿ ಸಂಸ್ಥೆಗಳಲ್ಲಿ ಎಲ್ಲವೂ ಮುಕ್ತವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ ಆರೋಗ್ಯಕರವಾದ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರೆಲ್ಲಾ ಉನ್ನತ ಹುದ್ದೆಯಲ್ಲಿದ್ದಾರೆ ಎಂದರು.
ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್, ಡಾ. ಗುರುಪ್ರಸಾದ್, ಡಾ. ಸಂಜಯ್ ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಪರಮೇಶ್ವರಪ್ಪ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವಿಲ್ಮಾ, ಕುಮಾರ್, ಮಂಜುನಾಥ್, ಗಂಗಾಧರ್, ಪರಮೇಶ್ವರಪ್ಪ, ಸಿ.ಎನ್.ಮಂಜುನಾಥ್, ಕೃಷ್ಣರಾಜ್ ಅರಸ್, ಮತ್ತಿತರರು ಉಪಸ್ಥಿತರಿದ್ದರು. ಮೊದಲಿಗೆ ಶಿಕ್ಷಕ ಬಸುಕುಮಾರ್ ಸ್ವಾಗತಿಸಿ ಶಶಿಧರ್ ನಿರೂಪಿಸಿ ಅಜ್ಜಯ್ಯ ವಂದಿಸಿದರು.
Free health checkup camp for primary and high school teachers