ಚಿಕ್ಕಮಗಳೂರು: ಈ ವೃತ್ತದ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಆನೆಗಳು ಮತ್ತು ಹುಲಿಗಳ ಸಂಖ್ಯೆಯೂ ಹೆಚ್ಚಾಗಿರುವುದಕ್ಕೆ ಅರಣ್ಯ ಇಲಾಖೆ ಪಾತ್ರ ಶ್ಲಾಘನಾರ್ಹವಾಗಿದ್ದು ಅಭಿವೃಧ್ದಿ ಮತ್ತು ಪರಿಸರ ಎರಡರಲ್ಲೂ ಸಮತೋಲನದ ಜೊತೆ ಕಠಿಣ ಕಾನೂನನ್ನು ಅನುಷ್ಠಾನ ಮಾಡುವ ಅನಿವಾರ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸಿ.ಎಸ್.ಮೀನಾ ನಾಗರಾಜ್ ಹೇಳಿದರು.
ನಗರ ಹೊರವಲಯದ ಶ್ರೀನಿವಾಸ ನಗರದಲ್ಲಿ ಬುಧವಾರ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮೂರ್ನಾಲ್ಕುವರ್ಷದ ಹಿಂದಿನ ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವದ ಬಗ್ಗೆ ಬದುಕಿರುವ ಎಲ್ಲರಿಗೂ ತಿಳಿದಿದೆ. ಅಂತಹ ಪರಿಶುದ್ದ ವಾತಾವರಣಕ್ಕೆ ದೇಶದಲ್ಲೆ ಎರಡನೆ ಸ್ಥಾನ ಎಂಬ ಹೆಗ್ಗಳಿಕೆ ನಮ್ಮ ಜಿಲ್ಲೆಗಿದೆ. ಅಂತಹ ಕ್ಲಿಸ್ಟಕರ ಸಂದರ್ಭದಲ್ಲೂ ಅರಣ್ಯ ಸಂರಕ್ಷಣೆ ಮಾಡಿರುವುದರಲ್ಲಿ ೬೧ ಜನ ಹುತಾತ್ಮರ ಪಾತ್ರ ಬಹಳ ದೊಡ್ಡದು ಎಂದು ಕಳೆದ ವರ್ಷ ಮೃತಪಟ್ಟ ಜಿಲ್ಲೆಯ ಕಾರ್ತಿಕ್ ಅವರನ್ನು ಸ್ಮರಿಸಿ ದಿನ ನಿತ್ಯದ ಕಾರ್ಯ ಚಟುವಟಿಕೆಯಲ್ಲಿ ಎಲ್ಲರೂ ಅರಣ್ಯ ಸಂಪತ್ತನ್ನು ಉಳಿಸಬೇಕು ಎಂದರು.
ಈ ಜಿಲ್ಲೆಯ ವಿಶೇಷತೆಯೇ ಅರಣ್ಯ ಸಂಪತ್ತು. ಭೂ ಭಾಗದ ಶೇ.೨೫-೩೦ ರಷ್ಟು ಅರಣ್ಯ ಪ್ರದೇಶ. ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯ ಅತ್ಯಂತ ಕ್ಲಿಸ್ಟಕರವಾದದ್ದು ಇಲ್ಲಿನ ನನ್ನ ೧೪ ತಿಂಗಳ ಅಧಿಕಾರದ ಅವಧಿಯಲ್ಲಿ ಅರಣ್ಯ ಇಲಾಖೆಯ ಸಮಸ್ಯೆಗಳು ಎಷ್ಟಿದೆ ಎಂಬದರ ಬಗ್ಗೆ ಚೆನ್ನಾಗಿ ಅರಿವಿದೆ.
ಮೂಕ ಪ್ರಾಣಿ, ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿರುವ ನಿಮ್ಮ ವೃತ್ತಿಗೆ ನನ್ನ ಮನದಾಳದಿಂದ ಅಭಿನಂದಿಸುತ್ತೇನೆ. ಪ್ರತಿ ಸಭೆಗಳಲ್ಲೂ ನಿಮ್ಮನ್ನು ಶ್ಲಾಘಿಸಿದವರ ಸಂಖೆ ಕಡಿಮೆ, ತೆಗಳಿದವರೆ ಹೆಚ್ಚು ಅಂತಹ ವೃತ್ತಿಯಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದೀರ. ಭದ್ರಾವನ್ಯಜೀವಿ ವಲಯ, ಕುದುರೆಮುಖ, ಮಸಗಲಿ ಮೀಸಲು ಅರಣ್ಯ, ಬಾಸೂರು ಕಾವಲು ಸೇರಿದಂತೆ ಅನೇಕ ಸ್ಥಳಗಳನ್ನು ನೋಡಿದಾಗ ಒಂದೆಡೆ ಪ್ರೇಕ್ಷಣೀಯ ಸ್ಥಳ ಜೊತೆಗೆ ವಿಶೇಷ ಅನುಭವ ನೀಡುವ ರೀತಿಯಲ್ಲಿ ಮಾರ್ಪಾಡು ಮಾಡಿರುವುದರಲ್ಲಿ ಅರಣ್ಯ ಇಲಾಖೆ ಪಾತ್ರ ಮಹತ್ವದ್ದು ಜೊತೆಗೆ ಮನುಷ್ಯನ ಬೆಳವಣಿಗೆಗೂ ಅಗತ್ಯವಿರುವ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಾಗಬೇಕಿದೆ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ದೇಶದಲ್ಲಿ ಅರಣ್ಯ ಮತ್ತು ವನ್ಯಪ್ರಾಣಿ ಸಂರಕ್ಷಣೆ ಸಲುವಾಗಿ ಬಲಿದಾನ ಮಾಡಿರುವ ಅರಣ್ಯ ಸಿಬ್ಬಂದಿಗಳ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಮಲೆನಾಡು ಭಾಗದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷದಿಂದ ಹಾಗೂ ಇದರ ಜೊತೆ ದೇಶದ ವಿವಿಧ ಭಾಗಗಳಲ್ಲಿ ಅರಣ್ಯ ಬೆಂಕಿಯಿಂದ ಹಲವು ಸಿಬ್ಬಂದಿ ಬಲಿದಾನವಾಗಿದೆ. ಕಳ್ಳಬೇಟೆ , ಅಕ್ರಮ ಗಣಿಗಾರಿಕೆಯನ್ನು ತಡೆಯುವ ಸಂದರ್ಭದಲ್ಲೂ ದುಷ್ಕರ್ಮಿಗಳು ಬೇರೆ ಬೇರೆ ರೀತಿ ಪ್ರಹಾರ ಮಾಡುತ್ತಿದ್ದು ಅಲ್ಲಿಯೂ ಸಿಬ್ಬಂದಿಗಳ ಜೀವಕ್ಕೆ ಹಾನಿಯಾಗುತ್ತಿದೆ. ಅರಣ್ಯ ಸಂಪತ್ತು, ವನ್ಯಜೀವ ರಕ್ಷಣೆ ಸಂದರ್ಭದಲ್ಲಿ ಜೀವದಾನ ಮಾಡಿದ ಬಹಳಷ್ಟು ಮಂದಿಗೆ ಮುಖ್ಯಮಂತ್ರಿ ಪದಕ ನೀಡಲಾಗಿದೆ ಎಂದರು.
ನಾವು ಮಾಡುತ್ತಿರುವ ಕೆಲಸ ಜನಸಾಮಾನ್ಯರ ಸಲುವಾಗಿ, ಕಾಡು ರಕ್ಷಣೆ ಮಾಡಿದರೆ ಮಾತ್ರ ಜನಕ್ಕೆ ನೀರು, ಉತ್ತಮ ಗಾಳಿ ಸಿಗುವ ಜೊತೆ ಕೃಷಿ ಕ್ಷೇತ್ರದಲ್ಲೂ ಅಭಿವೃದ್ದಿ ಹೊಂದಲು ಸಾಧ್ಯ. ಇದರ ನಡುವೆಯೂ ಮನುಷ್ಯ ದುರಾಸೆಯಿಂದ ನಾವು ಮಾಡುತ್ತಿರುವ ಕೆಲಸಕ್ಕೆ ಮನುಷ್ಯರೆ ಅಡ್ಡಿಪಡಿಸುತ್ತಿರುವುದರಿಂದ ಜೀವಹಾನಿಯಾಗುತ್ತಿದೆ ಎಂದು ಹುತ್ತಾತ್ಮರಿಗೆ ಗೌರವ ನಮನ ಸಲ್ಲಿಸುತ್ತಾ ಅವರ ಕುಟುಂಬಕ್ಕೆ ದೇವರು ಶಕ್ತಿ ಕರುಣಿಸಲಿ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರಮೇಶ್ ಬಾಬು ಮಾತನಾಡಿ, ನಾಡಿನ ಅರಣ್ಯ ಸಂಪತ್ತನ್ನು ರಕ್ಷಿಸುವ ಸಂದರ್ಭ ಕರ್ತವ್ಯದಲ್ಲಿ ಪ್ರಾಣತ್ಯಾಗ ಮಾಡಿದ ೬೧ ಹುತಾತ್ಮರ ಹೆಸರುಗಳನ್ನು ಸ್ಮರಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಪೆರೇಡ್ ಕಮಾಂಡರ್ ಸಂತೋಷ್ ನೇತೃತ್ವದಲ್ಲಿ ಪೆರೇಡ್ ನೆಡೆಸಲಾಯಿತು. ಹುತ್ತಾತ್ಮರ ಸ್ಮರಣಾರ್ಥ ಕೀರ್ತಿಚಕ್ರ ಪಿ.ಶ್ರೀನಿವಾಸ್ ಪುತ್ಥಳಿಗೆ ಪುಷ್ಪಗುಚ್ಚ ಅರ್ಪಿಸಿದರು. ಪೋಲೀಸರ ಬ್ಯಾಂಡ್ ವಾದನ ಜೊತೆಗೆ ಆರಕ್ಷಕ ತಂಡದಿಂದ ಮೂರು ಸುತ್ತು ಗಾಳಿಯಲ್ಲಿ ಕುಶಾಲತೋಪು ಹಾರಿಸಿ ಗೌರವ ನಮನ ಸಲ್ಲಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಭದ್ರಾಹುಲಿ ಯೋಜನೆ ಕ್ಷೇತ್ರ ನಿರ್ಧೇಶಕ ಯಶ್ಪಾಲ್ ಕ್ಷೀರ್ ಸಾಗರ್, ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಎಎಸ್ಪಿ ಜಿ.ಕೃಷ್ಣಮೂರ್ತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ರಮೇಶ್ ಬಾಬು, ಬಿ.ಎಂ.ರವೀಂದ್ರಕುಮಾರ್, ಕೆ.ಸಿ.ಆನಂದ್, ಜಿ.ಎ.ಸುದರ್ಶನ್, ಕೆ.ಟಿ.ಬೋರಯ್ಯ, ಹೆಚ್.ಎಸ್.ಪ್ರಕಾಶ್, ಪ್ರವೀಣ್ ಕುಮಾರ್, ಕೆ.ಎಸ್.ಮೋಹನ್ ಇದ್ದರು.
The National Forest Martyrs’ Day was organized by the Forest Department