ಚಿಕ್ಕಮಗಳೂರು: ಕರ್ನಾಟಕ ರಾಜ್ಯದ ಇತಿಹಾಸ, ಪರಂಪರೆ ರಾಜ-ಮಹಾರಾಜರ ಆಳ್ವಿಕೆಯ ಗತ ವೈಭವವನ್ನು ಸಾರುವ ‘ಐತಿಹಾಸ ವೈಭವ-೨೦೨೪-೨೫’ ಅ.೨೯ ಮತ್ತು ಅ.೩೦ ರಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗುವುದೆಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.
ಅವರು ಇಂದು ಈ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಐತಿಹಾಸಿಕ ಉತ್ಸವವನ್ನು ಯುವ ಪೀಳಿಗೆಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಏರ್ಪಡಿಸಲಾಗಿದ್ದು, ಇದು ಯಶಸ್ವಿಯಾದರೆ ಇದೇ ರೀತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಏರ್ಪಡಿಸಲು ಸಮಿತಿಯ ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಜೆವಿಎಸ್ ಶಾಲೆ ನಗರದ ಶಾಲೆಗಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ವಿಜ್ಞಾನ, ಇತಿಹಾಸ ಸೇರಿದಂತೆ ಎಲ್ಲಾ ಬಗೆಯ ವಿವರಗಳನ್ನು ನೀಡುತ್ತಿರುವ ಜೊತೆಗೆ ಕರ್ನಾಟಕದ ಐತಿಹಾಸಿಕ ಮತ್ತು ಇತಿಹಾಸ ಸಾರುವ ಇತಿಹಾಸ ವೈಭವ ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ನಗರದ ೧೨ ಶಾಲೆಗಳು ಭಾಗವಹಿಸುವುದರ ಮೂಲಕ ಸಹಕಾರ ನೀಡುತ್ತಿದ್ದಾರೆ. ಯುವಕರು ಮತ್ತು ವಿದ್ಯಾರ್ಥಿಗಳಿಗೆ ಇತಿಹಾಸ ಕುರಿತು ಜನರಲ್ಲಿ ಅರಿವು ಮೂಡಿಸಲು ಜೀವನದಲ್ಲಿ ಇದು ನೆನಪು ಉಳಿಯುವಂತಹ ಕಾರ್ಯಕ್ರಮವನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸ್ಪರ್ಧೆಯಲ್ಲಿ ವಿಜೇತರಾದ ಶಾಲೆಗೆ ಪ್ರಥಮ ೨೫ ಸಾವಿರ, ದ್ವಿತೀಯ ೨೦ ಸಾವಿರ ಹಾಗೂ ತೃತೀಯ ಬಹುಮಾನ ೧೫ ಸಾವಿರ ರೂಗಳ ನಗದು ಬಹುಮಾನವನ್ನು ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ಶ್ರಮಿಸುತ್ತಿರುವ ಜೆವಿಎಸ್ ಶಾಲೆಯ ಶಿಕ್ಷಕರು, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕರು, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಶಾಲಾ ಸಹ ಕಾರ್ಯದರ್ಶಿ ಕೆ.ಕೆ.ಮನುಕುಮಾರ್ ಮಾತನಾಡಿ, ಇತಿಹಾಸ ವೈಭವ ಕಾರ್ಯಕ್ರಮಕ್ಕೆ ನಗರದ ಜೆವಿಎಸ್ ಶಾಲೆ, ಇನ್ಫೆಂಟ್ ಜೀಸಸ್, ಯೂರೋ ಪ್ರೌಡ್, ಸಂಜೀವಿನಿ, ಜ್ಞಾನರಶ್ಮಿ, ಮಾಡೆಲ್ ಶಾಲೆ. ಮೌಂಟೆನ್ ವ್ಯೂ, ನರ್ಚರ್, ಸಾಯಿ ಏಂಜಲ್ಸ್ ಸೇರಿದಂತೆ ೧೨ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಪ್ರತೀ ಶಾಲೆಯಿಂದ ೨೦ ಮಕ್ಕಳಿಗೆ ಅವಕಾಶ ನೀಡಲಾಗಿದ್ದು, ಕಾರ್ಯಕ್ರಮದಲ್ಲಿ ಕೌಶಲ್ಯ ಪ್ರದರ್ಶನ ಮಾಡಲಿದ್ದಾರೆ ಎಂದರು.
ಜನರಿಗೆ ಕರ್ನಾಟಕ ರಾಜ್ಯದ ಇತಿಹಾಸ ತಿಳಿಸುವ ಕುರಿತಂತೆ ಆಳ್ವಿಕೆ ನಡೆಸಿದ ರಾಜರುಗಳ ಅಗತ್ಯ ಮಾಹಿತಿ ಹಾಗೂ ಅವರ ಕೊಡುಗೆಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಪ್ರತಿಭೆಗಳು ಅನಾವಣರಗೊಳ್ಳಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ಎಂ.ಸಿ.ಪ್ರಕಾಶ್, ಉಪಾಧ್ಯಕ್ಷರಾದ ಲಕ್ಷ್ಮಣ್ ಗೌಡ, ಪ್ರಾಂಶುಪಾಲೆ ತೇಜಸ್ವಿನಿ, ಮುಖ್ಯ ಶಿಕ್ಷಕ ವಿಜಿತ್, ವ್ಯವಸ್ಥಾಪಕರಾದ ತೇಜೇಶ್ ಮೂರ್ತಿ, ಸಿಇಓ ಕುಳ್ಳೇಗೌಡ ಹಾಗೂ ವಿವಿಧ ಶಾಲೆಯ ಸಂಯೋಜಕರು ಉಪಸ್ಥಿತರಿದ್ದರು.
History Glory Competition at Okkaligara Community Hall