ಚಿಕ್ಕಮಗಳೂರು: ಪ್ರಸ್ತುತ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಮಾಹಿತಿ ತುಂಬುವ ಕೆಲಸ ಮಾಡುತ್ತಿದೆ ಹೊರತು ಯುವಕರಿಗೆ ಉಪಯುಕ್ತವಾದ ಜೀವನದ ಮೌಲ್ಯ, ಸಂಸ್ಕಾರ ಬೆಳೆಸಿಕೊಳ್ಳುವಂತಾಗಬೇಕು ಎಂದು ನಿವೃತ್ತ ಉಪನ್ಯಾಸಕ ಹಾಗೂ ಪತ್ರಕರ್ತ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯಿಸಿದರು.
ಅವರು ಇಂದು ಇಲ್ಲಿನ ಜೂನಿಯರ್ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರು-ಶಿಷ್ಯರ ಸಮಾಗಮ ಕಾರ್ಯಕ್ರಮವನ್ನು ಗಿಡನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಚದುರಿ ಹೋದಂತ ಹಕ್ಕಿಗಳು ಮರಳಿ ಗೂಡು ಸೇರಿದಂತೆ ಮತ್ತೊಮ್ಮೆ ಹಳೇ ವಿದ್ಯಾರ್ಥಿಗಳು ಜೂನಿಯರ್ ಕಾಲೇಜು ಆವರಣದಲ್ಲಿ ಸೇರಿಕೊಂಡು ಗುರು-ಶಿಷ್ಯರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತಹ ೨೫ನೇ ವರ್ಷದ ಸಂಭ್ರಮ ಇದಾಗಿದೆ ಎಂದು ಶ್ಲಾಘಿಸಿದರು.
ಪ್ರಕೃತಿ ಮತ್ತು ಮನುಷ್ಯರ ಸಂಬಂಧ ಹಾಗೂ ಗುರು-ಶಿಷ್ಯರ ಸಂಬಂಧ ಕ್ಷೀಣಿಸುತ್ತಿರುವ ಈ ಘಳಿಗೆಯಲ್ಲಿ ಹಳೇಯ ಗುರುಗಳನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ಎಲ್ಲಾ ಶಿಷ್ಯರು ಸೇರಿ ಒಗ್ಗಟ್ಟಿನಿಂದ ಮಧುರ ಮೆಲಕುಗಳ, ತಮ್ಮ ಪ್ರೀತಿ, ಭಕ್ತಿ-ಭಾವದಿಂದ ನಮ್ಮನ್ನು ಗೌರವಿಸಿದ್ದಾರೆ ಎಂದರು.
ಶಿಷ್ಯರ ಉತ್ತರೋತ್ತರ ಭವಿಷ್ಯ ಚೆನ್ನಾಗಿರಲಿ, ಮುಂದೆ ಒಳ್ಳೆಯ ಸ್ಥಾನಮಾನಗಳನ್ನು ಅಲಂಕರಿಸುವ ಮೂಲಕ ಮನೆಗೆ, ಜಿಲ್ಲೆಗೆ, ಗುರುಗಳಿಗೆ ಕೀರ್ತಿ ತರುವಂತರಾಗಿ ಎಂದು ಶುಭ ಹಾರೈಸಿದರು.
ಹಳೇ ವಿದ್ಯಾರ್ಥಿ ಪವನ್ ಮಾತನಾಡಿ, ೧೯೯೮-೨೦೦೦ ಸಾಲಿನ ಹಳೇ ವಿದ್ಯಾರ್ಥಿಗಳು ಒಗ್ಗೂಡಿ ೨೫ನೇ ವರ್ಷದ ಸವಿ ನೆನಪಿಗಾಗಿ ಗುರು-ಶಿಷ್ಯರ ಸಮಾಗಮ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ತಿಳಿಸಿದರು.
ಅಂದಿನ ಉಪನ್ಯಾಸಕರಾಗಿದ್ದ ಇರ್ಷಾದ್ ಭಾನು, ಬಾಣೂರು ಚನ್ನಪ್ಪ, ಬಿ.ತಿಪ್ಪೇರುದ್ರಪ್ಪ, ಚಂದ್ರಶೇಖರ್ ಇವರುಗಳನ್ನು ಆತ್ಮೀಯವಾಗಿ ಆಹ್ವಾನಿಸಿ ಜೂನಿಯರ್ ಕಾಲೇಜು ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಏರ್ಪಡಿಸಿ ಸನ್ಮಾನಿಸಲಾಯಿತು ಎಂದರು.
ಹಳೇ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ಇದಾಗಿದ್ದು, ಸವಿನೆನಪಿಗಾಗಿ ಮಹಾಧನಿ, ಸಂಪಿಗೆ ಗಿಡಗಳನ್ನು ನೆಡಲಾಗಿದ್ದು, ಈಗಿನ ಪ್ರಾಚಾರ್ಯರಾದ ವಿರೂಪಾಕ್ಷ, ಉಪನ್ಯಾಸಕರುಗಳಾದ ಮಧು, ತ್ಯಾಗರಾಜ್ ಇವರುಗಳಿಗೆ ಈ ಗಿಡಗಳನ್ನು ಪೋಷಿಸುವಂತೆ ಮನವಿ ಮಾಡಿzರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಸಿದ್ದೇಶ್, ಪ್ರದೀಪ್, ರಮೇಶ್, ದಯಾನಂದ್, ಮಿಥುನಾ, ರವೀಶ್, ನಂಜುಂಡ, ಉಮೇಶ್, ಧರ್ಮ, ಸುಮ, ಉಮಾ, ಕಾವ್ಯ, ಮಾಲಾ, ಆಶ್ರಿಯಾ ಬಾನು ಉಪಸ್ಥಿತರಿದ್ದರು.
A teacher-pupil gathering organized by the old students in the junior college premises